ಮಾಸ್ಕೋ( ರಷ್ಯಾ): ಭಾರತದ ನಾಯಕತ್ವವು ಸ್ವಯಂ-ತೀರ್ಮಾನಗಳಿಂದ ಕೂಡಿದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಈ ಮೂಲಕ ಪುಟಿನ್ ಪ್ರಧಾನಿ ಮೋದಿ ಆಡಳಿತದ ಪರ ಬ್ಯಾಟ್ ಬೀಸಿದ್ದು, ಭಾರತವನ್ನು ಹಾಡು ಹೊಗಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪುಟಿನ್, "ಈ ಪಾಶ್ಚಿಮಾತ್ಯ ರಾಷ್ಟ್ರಗಳ ನಾಯಕರ ಮಾತನ್ನು ಭಾರತ ಕುರುಡಾಗಿ ಅನುಸರಣೆ ಮಾಡುವುದಿಲ್ಲ ಹಾಗೂ ಅವರ ಮಾತುಗಳಂತೆ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಅಷ್ಟೇ ಅಲ್ಲ ಪಶ್ಚಿಮದ ರಾಷ್ಟ್ರಗಳು ತಮ್ಮ ಮಾತು ಕೇಳದ ರಾಷ್ಟ್ರಗಳ ನಾಯಕರನ್ನು ಶತ್ರುಗಳಂತೆ ಬಿಂಬಿಸಲು ಯತ್ನಿಸುತ್ತಿವೆ. ಆದರೆ, ಭಾರತದ ವಿಚಾರದಲ್ಲಿ ಹೀಗೆ ಮಾಡಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಪಾಶ್ಚಿಮಾತ್ಯ ರಾಷ್ಟ್ರಗಳ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಸಮಯದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ನಾಯಕತ್ವಗಳು ಭಾರತದೊಂದಿಗೆ ಅದೇ ರೀತಿ ಮಾಡಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಿಲ್ಲ. ಪಶ್ಚಿಮದ ರಾಷ್ಟ್ರಗಳು ಪ್ಲರ್ಟಿಂಗ್ ಮಾಡಲು ಯತ್ನಿಸುತ್ತಿದ್ದಾರೆ. ನಾವೆಲ್ಲರೂ ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಏಷ್ಯಾದ ಪರಿಸ್ಥಿತಿ ಈಗ ಭಿನ್ನವಾಗಿದೆ. ಎಲ್ಲವೂ ಸ್ಪಷ್ಟವಾಗಿದೆ. ನಾನು ಹೇಳಲು ಬಯಸುತ್ತೇನೆ ಭಾರತೀಯ ನಾಯಕತ್ವವು ಸ್ವಯಂ - ನಿರ್ದೇಶಿತವಾಗಿದೆ. ಇದು ರಾಷ್ಟ್ರೀಯ ಹಿತಾಸಕ್ತಿಗಗಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಪಾಶ್ಚಿಮಾತ್ರ್ಯ ರಾಷ್ಟ್ರಗಳ ಆ ಪ್ರಯತ್ನಗಳಿಗೆ ಯಾವುದೇ ಅರ್ಥವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಪುಟಿನ್ ಹೇಳಿದ್ದಾರೆ.
ಭಾರತಕ್ಕೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ಸಿಗಬೇಕು: ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆಯಲು ಅರ್ಹವಾಗಿವೆ ಎಂದು ರಷ್ಯಾದ ಅಧ್ಯಕ್ಷರು ಇದೇ ವೇಳೆ ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ಸುಧಾರಣೆಗಳನ್ನು ತರಬೇಕಿದೆ ಎಂದು ಅವರು ಪುಟಿನ್ ಪ್ರತಿಪಾದಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.