ವಿಶ್ವಸಂಸ್ಥೆ(ನ್ಯೂಯಾರ್ಕ್ ಸಿಟಿ): ಜಾಗತಿಕ ಆಹಾರ ಭದ್ರತೆ, ಸಮಾನತೆ, ಸಹಾನುಭೂತಿಯನ್ನು ಪ್ರದರ್ಶಿಸುವುದು ಹಾಗು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವಲ್ಲಿ ಜಾಗತಿಕವಾಗಿ ಭಾರತ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಸುತ್ತಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಪ್ರಥಮ ಕಾರ್ಯದರ್ಶಿ ಸ್ನೇಹಾ ದುಬೆ ವಿವರಿಸಿದರು.
ಭಾರತ ವಿಶ್ವದ ಅತಿದೊಡ್ಡ ಆಹಾರ ಆಧಾರಿತ ಸುರಕ್ಷತಾ ಕಾರ್ಯಕ್ರಮ ನಡೆಸುತ್ತಿದೆ. ಕೋವಿಡ್ ಸಮಯದಲ್ಲಿ 800 ಮಿಲಿಯನ್ ಜನರಿಗೆ ಆಹಾರ ನೆರವು ಮತ್ತು 400 ಮಿಲಿಯನ್ ಜನರಿಗೆ ನಗದು ವರ್ಗಾವಣೆ ಮಾಡಿದೆ. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಆರೋಗ್ಯಕರ ಊಟವನ್ನು ಒದಗಿಸುವುದನ್ನು ಖಾತ್ರಿಪಡಿಸುವ ಮೂಲಕ ಶಾಲಾ ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುತ್ತಿದೆ.
ವಿಶೇಷವಾಗಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ದುರ್ಬಲ ವರ್ಗದ ಗುಂಪುಗಳಿಗೆ ಪೌಷ್ಟಿಕಾಂಶದ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದೆ. ನಮ್ಮ ಫಾರ್ಮ್-ಟು-ಟೇಬಲ್ ಡಿಜಿಟಲ್ ಉಪಕ್ರಮಗಳಲ್ಲಿ ರೈತರಿಗಿರುವ ವೆಬ್ ಪೋರ್ಟಲ್‌ಗಳು, ಕೃಷಿ-ಸಲಹೆ ಸೇವೆಗಳು, ಕೃಷಿ ಸರಕುಗಳ ಆನ್‌ಲೈನ್ ಜಾಲ, ಬೆಲೆ ಮುನ್ಸೂಚನೆ ಮತ್ತು ಗುಣಮಟ್ಟಕ್ಕಾಗಿ ಬ್ಲಾಕ್‌ಚೈನ್ ತಂತ್ರಜ್ಞಾನದ ಬಳಕೆ ಸೇರಿವೆ ಎಂದು ಅವರು ಹೇಳಿದರು.