ಇಸ್ಲಾಮಾಬಾದ್(ಪಾಕಿಸ್ತಾನ) :ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಗಡೀಪಾರಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಲಂಡನ್‌ನಿಂದ 4 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಮರಳಿದ್ದಾರೆ. ಇಂದು ಅವರು ಇಸ್ಲಾಮಾಬಾದ್ನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮುಂದಿನ ಚುನಾವಣೆಯಲ್ಲಿ ಅವರು ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್ - ನವಾಜ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಕಾನೂನು ಸಚಿವ ಅಜಮ್ ತಾರಾರ್ ಮತ್ತು ಪಕ್ಷದ ಮುಖಂಡರು ಸೇರಿದಂತೆ ಪಕ್ಷದ ಕಾರ್ಯಕರ್ತಕರು, ಬೆಂಬಲಿಗರು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಜೊತೆಗೆ ಪಕ್ಷದ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ರ್‍ಯಾಲಿ ಕೂಡ ನಡೆಸಿದ್ದರು.
ಈ ಬಗ್ಗೆ ತನ್ನ ಅಧಿಕೃತ ಎಕ್ಸ್ನಲ್ಲಿ ಹಂಚಿಕೊಂಡಿರುವ ಪಿಎಂಎಲ್-ಎನ್ ಪಕ್ಷ, 'ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ತಾಯ್ನಾಡಿಗೆ ಮರಳಿದ್ದಾರೆ. ಇನ್ನು ಮುಂದೆ ರಾಜಕೀಯದಲ್ಲಿ ಹೊಸ ಮನ್ವಂತರ ಶುರುವಾಗಲಿದೆ' ಎಂದಿದೆ. 73 ವರ್ಷದ ಷರೀಫ್ ವಿರುದ್ಧ ಕೇಳಿಬಂದಿದ್ದ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಕೋರ್ಟ್ ಹೇಳಿತ್ತು. ಜೊತೆಗೆ 8 ಮಿಲಿಯನ್ ಯುರೋ ದಂಡದ ಜೊತೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ನವಾಜ್, ಮರಿಯಮ್ ಮತ್ತು ಕ್ಯಾಪ್ಟನ್ ಮುಹಮ್ಮದ್ ಸಫ್ದರ್ ಅವರನ್ನು ಬಂಧಿಸಲಾಗಿತ್ತು.
ಮುಂದಿನ ವಿಚಾರಣೆಯಲ್ಲಿ ಕೋರ್ಟ್, ಮೂವರನ್ನೂ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಜೊತೆಗೆ ನೀಡಲಾಗಿದ್ದ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಯಿತು. ಇದಾದ ಬಳಿಕ ಅವರನ್ನು 2020 ರಲ್ಲಿ ಗಡೀಪಾರು ಮಾಡಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ನೋಡಿಕೊಳ್ಳಲು ಅವರು ಆ ಸಮಯದಲ್ಲಿ ಲಂಡನ್‌ಗೆ ತೆರಳಿದರು.