ನ್ಯೂಯಾರ್ಕ್(ಅಮೆರಿಕ):ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳಾಗಿ ಅಲ್ಜೀರಿಯಾ, ಗಯಾನಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ದಕ್ಷಿಣ ಕೊರಿಯಾ ಮಂಗಳವಾರ ಆಯ್ಕೆಯಾಗಿವೆ. ನಿನ್ನೆ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಹೊಸದಾಗಿ ಭದ್ರತಾ ಮಂಡಳಿಗೆ ಸೇರ್ಪಡೆಯಾಗಿರುವ ರಾಷ್ಟ್ರಗಳು ಜನವರಿ 1, 2024 ರಿಂದ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ.
ಪ್ರತಿವರ್ಷ ಭದ್ರತಾ ಮಂಡಳಿಗೆ 5 ಸದಸ್ಯ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಅದೇ ರೀತಿ ಈ ವರ್ಷ ಅಲ್ಜೀರಿಯಾ, ಗಯಾನಾ, ರಿಪಬ್ಲಿಕ್ ಆಫ್ ಕೊರಿಯಾ, ಸಿಯೆರಾ ಲಿಯೋನ್ ಮತ್ತು ಸ್ಲೊವೇನಿಯಾಗೆ ಅವಕಾಶ ನೀಡಲಾಗಿದೆ. ಇವು ಮುಂದಿನ 2 ವರ್ಷ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಪಡೆಯಲಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77 ನೇ ಅಧಿವೇಶನದ ಅಧ್ಯಕ್ಷ ಸಿಸಾಬಾ ಕೊರೊಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯರಾಗಿ ಆಯ್ಕೆಯಾದ ಅಲ್ಜೀರಿಯಾ, ಗಯಾನಾ, ರಿಪಬ್ಲಿಕ್ ಆಫ್ ಕೊರಿಯಾ, ಸಿಯೆರಾ ಲಿಯೋನ್ ಮತ್ತು ಸ್ಲೊವೇನಿಯಾ ದೇಶಗಳಿಗೆ ಅಭಿನಂದನೆಗಳು. ಚುನಾವಣೆಯಲ್ಲಿ ಭಾಗವಹಿಸಿ ಆಯ್ಕೆ ಮಾಡಿದ ಇತರ ದೇಶಗಳಿಗೂ ಧನ್ಯವಾದಗಳು. ಐದು ರಾಷ್ಟ್ರಗಳ ಅವರಧಿ 2024ರ ಜನವರಿ 1 ರಿಂದ ಪ್ರಾರಂಭವಾಗಿ ಮುಂದಿನ 2 ವರ್ಷಗಳವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.
ಭದ್ರತಾ ಮಂಡಳಿ ಸರ್ಜರಿಗೆ ಭಾರತ ಒತ್ತಾಯ:ಅಸ್ತಿತ್ವದಲ್ಲಿರುವ ಭದ್ರತಾ ಮಂಡಳಿಗೆ ಸರ್ಜರಿ ಮಾಡುವ ಅಗತ್ಯವಿದೆ ಎಂದು ಭಾರತ ಮತ್ತೊಮ್ಮೆ ಧ್ವನಿ ಎತ್ತಿದೆ. ಸದ್ಯದ ಮಟ್ಟಿಗಿನ ಭದ್ರತಾ ಮಂಡಳಿ ವಿಶ್ವವನ್ನು ಪ್ರತಿನಿಧಿಸುವ ಮಂಡಳಿಯಾಗಿ ಉಳಿದಿಲ್ಲ. ಇತರ ರಾಷ್ಟ್ರಗಳಿಗೂ ಮಂಡಳಿಯಲ್ಲಿ ಸ್ಥಾನ ನೀಡಬೇಕು. ಆಗ ಅದು ರಚನಾತ್ಮಕ ರೂಪು ಪಡೆಯುವ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.