ಜೆರುಸಲೆಂ/ನವದೆಹಲಿ : ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಯುದ್ಧ ಮುಂದುವರಿದಿದೆ. ಈ ಯುದ್ಧದಲ್ಲಿ ಹಲವು ದೇಶಗಳ ನಾಗರಿಕರು ಸಾವನ್ನಪ್ಪಿದ್ದಾರೆ. ಈ ನಡುವೆ ಭಾರತವು ಇಸ್ರೇಲ್‌ನಿಂದ ತನ್ನ ನಾಗರಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಆಪರೇಷನ್ ಅಜಯ್ ಅನ್ನು ಪ್ರಾರಂಭಿಸಿದೆ. ಈ ಸರಣಿಯ ಭಾಗವಾಗಿ ಇಸ್ರೇಲ್‌ನಿಂದ 212 ಭಾರತೀಯ ನಾಗರಿಕರ ಮೊದಲ ಬ್ಯಾಚ್ ಇಂದು ಬೆಳಗ್ಗೆ AI1140 ಸಂಖ್ಯೆಯ ಮೊದಲ ಚಾರ್ಟರ್ ವಿಮಾನದ ಮೂಲಕ ನವದೆಹಲಿ ವಿಮಾನ ನಿಲ್ದಾಣವನ್ನು ಬಂದು ತಲುಪಿದೆ. ಈ ವಿಮಾನವು ಗುರುವಾರ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಇಸ್ರೇಲ್‌ನಿಂದ ಭಾರತೀಯ ಪ್ರಜೆಗಳನ್ನು ಕರೆತರಲು ಅಗತ್ಯವಿದ್ದರೆ ವಾಯುಪಡೆಯನ್ನೂ ಬಳಸಿಕೊಳ್ಳಲಾಗುವುದು. ಸದ್ಯಕ್ಕೆ ಚಾರ್ಟರ್ ಫ್ಲೈಟ್‌ಗಳನ್ನು ಬಳಸಲಾಗುತ್ತಿದೆ, ಇಂದು ಬೆಳಗ್ಗೆ ಸುಮಾರು 212 ಜನರನ್ನು ವಾಪಸ್ ಕರೆತರಲಾಗಿದೆ. ಇಸ್ರೇಲ್‌ನಲ್ಲಿ ನೆಲೆಸಿರುವ ನಮ್ಮ ಭಾರತೀಯ ನಾಗರಿಕರು ಶೀಘ್ರದಲ್ಲಿ ರಾಯಭಾರ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ನಾವು ಮನವಿ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, "ಆಪರೇಷನ್ ಅಜಯ್ ಚಾಲನೆಯಲ್ಲಿದೆ. ವಿಮಾನದಲ್ಲಿದ್ದ 212 ನಾಗರಿಕರು ನವದೆಹಲಿಯ ಮಾರ್ಗದಲ್ಲಿದ್ದಾರೆ ಎಂದು ತಿಳಿಸಿದ್ದರು. ಹಾಗೆಯೇ, "212 ಭಾರತೀಯ ಪ್ರಜೆಗಳನ್ನು ಹೊತ್ತ ಆಪರೇಷನ್ ಅಜಯ್‌ನ ಮೊದಲ ವಿಮಾನವು ಟೆಲ್ ಅವೀವ್‌ನಿಂದ ದೆಹಲಿಗೆ ಹೊರಟಿದೆ. ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿಮಾನದಲ್ಲಿರುವ ಪ್ರತಿಯೊಬ್ಬರಿಗೂ ಸುರಕ್ಷಿತ ಪ್ರಯಾಣವನ್ನು ಬಯಸುತ್ತದೆ" ಎಂದು ಭಾರತೀಯ ಮಿಷನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು.
ಇಸ್ರೇಲಿನಿಂದ ಆಗಮಿಸಿದ ಪ್ರಯಾಣಿಕರಿಗೆ ಸ್ವಾಗತಕೋರಿದ ಸಚಿವ:ಈ ನಡುವೆ, ಇಂದು ನಸುಕಿನಲ್ಲೇ ನವದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದರು.