ಲಂಡನ್ :ಅಕ್ರಮ ವಲಸಿಗರನ್ನು ಉದ್ದೇಶಪೂರ್ವಕವಾಗಿ ತಮ್ಮ ದೇಶದ ಗಡಿಗಳಿಗೆ ನುಗ್ಗಿಸುವ ಮೂಲಕ ಶತ್ರು ದೇಶಗಳು ತಮ್ಮ ದೇಶದ ಸಮಾಜದಲ್ಲಿ ಅಸ್ಥಿರತೆ ಮೂಡಿಸಲು ಪ್ರಯತ್ನಿಸುತ್ತಿವೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಅಕ್ರಮ ವಲಸೆಯ ವಿರುದ್ಧ ಪ್ರಬಲ ಧ್ವನಿ ಎತ್ತಿರುವ ಸುನಕ್, ಈ ಸಮಸ್ಯೆಯ ಪರಿಹಾರಕ್ಕಾಗಿ ತ್ವರಿತ ಕ್ರಮ ತೆಗೆದುಕೊಳ್ಳದಿದ್ದರೆ ಹೆಚ್ಚುತ್ತಿರುವ ವಲಸಿಗರ ಸಂಖ್ಯೆ ಯುರೋಪಿಯನ್ ದೇಶಗಳನ್ನು ವಿನಾಶದಂಚಿಗೆ ತರಬಹುದು ಎಂದು ಎಚ್ಚರಿಸಿದ್ದಾರೆ ಎಂದು ದಿ ಈವಿನಿಂಗ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ಇಟಲಿಯ ಇಟಾಲಿಯನ್ ಕನ್ಸರ್ವೇಟಿವ್ಸ್ ಮತ್ತು ಬಲಪಂಥೀಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಸುನಕ್, "ಕ್ರಿಮಿನಲ್ ಗ್ಯಾಂಗ್ಗಳು ನಮ್ಮ ಮಾನವೀಯತೆಯನ್ನು ದುರುಪಯೋಗಪಡಿಸಿಕೊಳ್ಳಲು ಅಡ್ಡದಾರಿ ಹಿಡಿಯುತ್ತಿವೆ ಮತ್ತು ಅಕ್ರಮ ವಲಸಿಗರನ್ನು ದೋಣಿಗಳ ಮೂಲಕ ತಮ್ಮ ಗಡಿಗಳಿಗೆ ತಲುಪಿಸುವ ಪ್ರಯತ್ನದಲ್ಲಿ ಆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ" ಎಂದು ಹೇಳಿದರು.
"ನಾವು ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳದಿದ್ದರೆ ಅಕ್ರಮ ವಲಸಿಗರ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಇದು ನಮ್ಮ ದೇಶಗಳ ಮೇಲೆ ವಿಪರೀತ ಹೊರೆಯನ್ನುಂಟು ಮಾಡುತ್ತದೆ ಮತ್ತು ಇದರಿಂದ ನಿಜವಾಗಿಯೂ ಸಹಾಯದ ಅಗತ್ಯವಿರುವವರಿಗೆ ನಾವು ಸಹಾಯ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಲಿದೆ" ಎಂದು ಸುನಕ್ ಕಳವಳ ವ್ಯಕ್ತಪಡಿಸಿದರು.