ವಿಲ್ಮಿಂಗ್ಟನ್ (ಅಮೆರಿಕ):ಸೂಪರ್ ಪವರ್ ಅಮೆರಿಕದಲ್ಲಿ ಭದ್ರತಾ ವೈಫಲ್ಯದ ಘಟನೆ ಕೋಲಾಹಲಕ್ಕೆ ಕಾರಣವಾಗಿದೆ. ಅಧ್ಯಕ್ಷ ಜೋ ಬೈಡನ್ ಅವರ ಬೆಂಗಾವಲು ಪಡೆಯ ವಾಹನಕ್ಕೆ ಖಾಸಗಿ ಕಾರು ಡಿಕ್ಕಿ ಹೊಡೆದಿದೆ. ಅಮೆರಿಕ ಕಾಲಮಾನದ ಪ್ರಕಾರ ಭಾನುವಾರ ರಾತ್ರಿ ಡೆಲ್ವೇರ್ನಲ್ಲಿ ಈ ಘಟನೆ ನಡೆದಿದೆ.
ಶ್ವೇತಭವನದ ಪ್ರಕಾರ, ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಜಿಲ್ ಭಾನುವಾರ ರಾತ್ರಿ ಡೆಲ್ವೇರ್ನಲ್ಲಿರುವ ತಮ್ಮ ಪಕ್ಷದ ಪ್ರಚಾರ ಕಚೇರಿಗೆ ತೆರಳಿದ್ದರು. ಅಲ್ಲಿ ರಾತ್ರಿ ಊಟ ಮುಗಿಸಿ ಬೈಡನ್ ದಂಪತಿ ಕಚೇರಿಯ ಹೊರಗೆ ಬೆಂಗಾವಲು ಪಡೆಯತ್ತ ಬರುತ್ತಿದ್ದಾಗ ಕಾರೊಂದು ನುಗ್ಗಿ ಯುಎಸ್ ಸೀಕ್ರೆಟ್ ಸರ್ವೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯಲು ಯತ್ನಿಸಿದೆ.
ಆ ಸಮಯದಲ್ಲಿ ಜಿಲ್ ಬೈಡೆನ್ ಅಧ್ಯಕ್ಷೀಯ ವಾಹನದಲ್ಲಿ ಕುಳಿತಿದ್ದರು. ಜೋ ಬೈಡನ್ ವಾಹನದ ಬಳಿ ಇದ್ದರು. ಬೈಡನ್‌ನಿಂದ ಕೇವಲ 130 ಅಡಿ ದೂರದಲ್ಲಿ ಈ ಘಟನೆ ನಡೆದಿದೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಬೈಡನ್‌ರನ್ನು ಅಧ್ಯಕ್ಷೀಯ ವಾಹನಕ್ಕೆ ಕರೆದೊಯ್ದರು. ಮತ್ತೊಂದೆಡೆ, ರಹಸ್ಯ ಸೇವಾ ಸಿಬ್ಬಂದಿ ಘಟನೆಯಲ್ಲಿ ಭಾಗಿಯಾಗಿದ್ದ ವಾಹನವನ್ನು ಸುತ್ತುವರೆದು ಚಾಲಕನನ್ನು ಬಂಧಿಸಿದರು.
ಘಟನೆಯ ಹಿನ್ನೆಲೆಯಲ್ಲಿ ಬೈಡನ್ ದಂಪತಿಯನ್ನು ತಕ್ಷಣವೇ ಶ್ವೇತಭವನಕ್ಕೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ರಾಷ್ಟ್ರಪತಿ ಮತ್ತು ಪ್ರಥಮ ಮಹಿಳೆ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಬೈಡನ್ ಮತ್ತು ಅವರ ಪತ್ನಿ ಸುರಕ್ಷಿತವಾಗಿದ್ದಾರೆ. ಅವರಿಬ್ಬರಿಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಶ್ವೇತಭವನದ ಪ್ರಕಾರ, ವಿಲ್ಮಿಂಗ್ಟನ್‌ನಲ್ಲಿರುವ ಬೈಡನ್ ಮತ್ತು ಹ್ಯಾರಿಸ್ ಪ್ರಧಾನ ಕಚೇರಿಯನ್ನು ರಾತ್ರಿ 8:07 ಕ್ಕೆ ತೊರೆದರು. ಅವರು ತಮ್ಮ ಚುನಾವಣಾ ಪ್ರಚಾರ ತಂಡದೊಂದಿಗೆ ಇದ್ದರು. ಬೈಡನ್ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸ್ವಲ್ಪ ಸಮಯದ ನಂತರ, ಡೆಲ್ವೇರ್ ಲೈಸೆನ್ಸ್ ಪ್ಲೇಟ್‌ಗಳನ್ನು ಹೊಂದಿರುವ ವಾಹನವು ಪ್ರಚಾರ ಕಚೇರಿಯ ಪ್ರವೇಶದ್ವಾರದ ಮುಂಭಾಗದಲ್ಲಿ ಕಾವಲು ಕಾಯುತ್ತಿದ್ದ ಎಸ್‌ಯುವಿ ವಾಹನಕ್ಕೆ ಹೊಡೆದಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ರಹಸ್ಯ ಭದ್ರತಾ ಸಿಬ್ಬಂದಿ ಡಿಕ್ಕಿ ಹೊಡೆದ ಕಾರನ್ನು ಸುತ್ತುವರಿದು ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.
ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಡಿಯೋಗಳು ಹರಿದಾಡುತ್ತಿವೆ. ಇದರಲ್ಲಿ ಭದ್ರತಾ ಸಿಬ್ಬಂದಿ ಬೈಡನ್ ಅವರನ್ನು ಕಾರಿಗೆ ಕರೆದೊಯ್ಯುವುದನ್ನು ತೋರಿಸಲಾಗಿದೆ. ಅಪಘಾತದ ರಭಸಕ್ಕೆ ಕಾರಿನ ಬಂಪರ್ ಜಖಂಗೊಂಡಿದೆ. ಘಟನೆಯ ನಂತರ ಬೈಡನ್ ದಂಪತಿ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಓದಿ:ಕ್ರಿಸ್‌ಮಸ್ ಧಾರ್ಮಿಕ ಸಮಾರಂಭದಲ್ಲಿ ಗುಂಡಿನ ದಾಳಿ; 16 ಜನ ಸಾವು, ಅನೇಕರಿಗೆ ಗಾಯ