ದುಬೈ(ಯುಎಇ):ದೇಶಾದ್ಯಂತ ಸಡಗರ - ಸಂಭ್ರಮದಿಂದ ನಿನ್ನೆ(ಮಂಗಳವಾರ) 77ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಗುರುತಿಸಿಕೊಂಡಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ(ಯುಎಇ) ಬುರ್ಜ್ ಖಲೀಫಾ ತ್ರಿವರ್ಣದ ಬಣ್ಣಗಳಿಂದ ಕಂಗೊಳಿಸಿತು.
ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮಂಗಳವಾರ ಐಕಾನಿಕ್ ಬುರ್ಜ್ ಖಲೀಫಾವನ್ನು ತ್ರಿವರ್ಣದ ಬಣ್ಣಗಳಲ್ಲಿ ಬೆಳಗಿಸಲಾಯಿತು. ತ್ರಿವರ್ಣ ಧ್ವಜ ಮಾತ್ರವಲ್ಲದೇ ವಿಶ್ವದ ಅತಿ ಎತ್ತರದ ಕಟ್ಟಡ "ಭಾರತ ಮಾತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಮತ್ತು "ಭಾರತ ಯುಎಇ ಸ್ನೇಹ ದೀರ್ಘಕಾಲ ಉಳಿಯಲಿ" ಎಂಬ ಉಲ್ಲೇಖಗಳನ್ನು ಸಹ ಪ್ರದರ್ಶಿಸಿದೆ. ಅಲ್ಲದೇ 'ಹರ್ ಘರ್ ತಿರಂಗಾ' ಮತ್ತು 'ಜೈ ಹಿಂದ್' ಉಲ್ಲೇಖಗಳೊಂದಿಗೆ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಸಹ ಪ್ರದರ್ಶಿಸಿದೆ. ಜುಲೈನಲ್ಲಿ, ಯುಎಇಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತದ ಸಂಕೇತವಾಗಿ ಬುರ್ಜ್ ಖಲೀಫಾವನ್ನು ತ್ರಿವರ್ಣಗಳಲ್ಲಿ ಬೆಳಗಲಾಗಿತ್ತು.
ಇದನ್ನೂ ಓದಿ:Independence Day 2023: ತ್ರಿವರ್ಣ ರಂಗಿನಿಂದ ರಾರಾಜಿಸುತ್ತಿದೆ ಭಾರತ... ಕೆಂಪುಕೋಟೆಯಲ್ಲಿ ಬಿಗಿ ಬಂದೋಬಸ್ತ್
ಈ ಮಧ್ಯೆ, ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಎಕ್ಸ್ (ಟ್ವಿಟರ್)ನಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. "ಭಾರತ ತನ್ನ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವಾಗ, ನಾನು ಈ ಮಹಾನ್ ರಾಷ್ಟ್ರದ ನಾಯಕತ್ವ ಮತ್ತು ಜನರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸಂತೋಷದಾಯಕ ಸಂದರ್ಭದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರತದೊಂದಿಗೆ ಹಂಚಿಕೆಯ ಸಮೃದ್ಧಿ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮುಂದುವರೆಸುತ್ತದೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.