ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ರಾಜಧಾನಿ ಜೋಹಾನ್ಸ್ಬರ್ಗ್ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿ ಇತರ ಸದಸ್ಯ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದಾರೆ. ಗುರುವಾರ ಪಿಎಂ ಮೋದಿ ಹಾಗೂ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಚುಟುಕು ಮಾತುಕತೆ ನಡೆಸಿದ್ದಾರೆ.
15ನೇ ಬ್ರಿಕ್ಸ್ ಶೃಂಗಸಭೆ ನಿಮಿತ್ತ ಗುರುವಾರ ಸದಸ್ಯ ರಾಷ್ಟ್ರಗಳ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ತಮ್ಮ ಆಸನಗಳತ್ತ ತೆರಳುತ್ತಿದ್ದಾಗ ಮೋದಿ ಹಾಗೂ ಜಿನ್‌ಪಿಂಗ್ ಸಂಕ್ಷಿಪ್ತ ಸಂಭಾಷಣೆ ನಡೆಸಿದ್ದಾರೆ. ಪ್ರಧಾನಿ ಮೋದಿ ಮುಂದೆ ಸಾಗುತ್ತಾ ಜಿನ್‌ಪಿಂಗ್ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಮಾತುಕತೆ ನಡೆಸಿರುವುದು ಕಂಡು ಬಂದಿದೆ.
2020ರ ಏಪ್ರಿಲ್ನಿಂದ ಭಾರತ ಮತ್ತು ಚೀನಾ ನಡುವೆ ಗಡಿ ಬಿಕ್ಕಟ್ಟು ಏರ್ಪಟ್ಟಿದೆ. ಪೂರ್ವ ಲಡಾಖ್‌ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಮತ್ತು ಭಾರತೀಯ ಪಡೆಗಳ ನಡುವೆ ಸಂಘರ್ಷದಿಂದ ಎರಡು ರಾಷ್ಟ್ರಗಳ ಸಂಬಂಧ ಕಳೆದ ಮೂರು ವರ್ಷಗಳಿಂದ ಅಷ್ಟಕ್ಕಷ್ಟೇ ಇದೆ. ಗಡಿ ಸಮಸ್ಯೆ ಪರಿಹಾರಕ್ಕೆ ಇದುವರೆಗೆ 19 ಸುತ್ತಿನ ಮಾತುಕತೆಗಳು ನಡೆಸಲಾಗಿದೆ.
ಗಡಿ ಬಿಕ್ಕಟ್ಟಿನ ಮಧ್ಯೆ ಕಳೆದ 2022ರ ನವೆಂಬರ್ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಅಲ್ಲಿನ ಅಧ್ಯಕ್ಷ ಜೋಕೊ ವಿಡೋಡೋ ಆಯೋಜಿಸಿದ್ದ ಜಿ20 ಔತಣಕೂಟದಲ್ಲಿ ಪ್ರಧಾನಿ ಮೋದಿ ಹಾಗೂ ಜಿನ್‌ಪಿಂಗ್ ಪರಸ್ಪರ ಹಸ್ತಲಾಘವ ಮಾಡಿದ್ದರು. 2020ರ ಗಡಿ ಬಿಕ್ಕಟ್ಟಿನ ಬಳಿಕ ಮೊದಲ ಸಲ ಉಭಯ ನಾಯಕರು ಪರಸ್ಪರ ಶುಭಾಷಯ ಹಂಚಿಕೊಂಡಿದ್ದರು. ಇದೀಗ ಜೋಹಾನ್ಸ್ಬರ್ಗ್ನಲ್ಲಿ ಇಬ್ಬರು ನಾಯಕರ ಸಂಕ್ಷಿಪ್ತ ಮಾತುಕತೆ ವರದಿಯಾಗಿದೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಮಂಗಳವಾರ ಭಾರತದಿಂದ ಜೋಹಾನ್ಸ್‌ಬರ್ಗ್ ಪ್ರಯಾಣ ಬೆಳೆಸಿದ್ದರು. ಮೊದಲ ದಿನ ಬ್ರಿಕ್ಸ್ ಬಿಸಿನೆಸ್ ಫೋರಂ ನಾಯಕರ ಸಂವಾದದಲ್ಲಿ ಪಾಲ್ಗೊಂಡಿದ್ದರು. ''ಭಾರತವು ಶೀಘ್ರವೇ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿದೆ. ಮುಂಬರುವ ವರ್ಷಗಳಲ್ಲಿ ಜಗತ್ತಿನ ಬೆಳೆವಣಿಗೆಯ ಎಂಜಿನ್ ಆಗಲಿದೆ'' ಎಂದು ಪ್ರಧಾನಿ ಹೇಳಿದ್ದರು.
ಗುರುವಾರ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಮೊದಲ ಹಂತದ ಬಿಕ್ಸ್ ವಿಸ್ತರಣೆ ಒಪ್ಪಿಗೆ ಸೂಚಿಸಿ, ಅರ್ಜೆಂಟಿನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳನ್ನು ಬ್ರಿಕ್ಸ್ನ ಹೊಸ ಸದಸ್ಯರನ್ನಾಗಿ ಸೇರ್ಪಡೆ ಮಾಡುವ ಬಗ್ಗೆ ರಾಮಫೋಸಾ ಘೋಷಿಸಿದ್ದರು. ಬ್ರಿಕ್ಸ್ ಗುಂಪಿನಲ್ಲಿ ಪ್ರಸ್ತುತ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳಿವೆ.
ಇದನ್ನೂ ಓದಿ:ಬ್ರಿಕ್ಸ್ ವಿಸ್ತರಣೆ: 6 ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆಗೆ ಒಪ್ಪಿಗೆ