ವಾಷಿಂಗ್ಟನ್:ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿಯಾಗಿ ಆಯ್ಕೆ ಆಗಿರುವುದು ಅಭೂತಪೂರ್ವ ಮೈಲಿಗಲ್ಲು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ರಿಷಿ ಸುನಕ್ ಈಗ ಯುಕೆ ಪ್ರಧಾನಿಯಾಗಿದ್ದಾರೆ ಎಂಬ ಸುದ್ದಿ ನಮಗೆ ಸಿಕ್ಕಿತು. ನಾಳೆ ಅವರು ಕಿಂಗ್ ಚಾರ್ಲ್ಸ್ ಅವರನ್ನು ಭೇಟಿ ಮಾಡಲಿದ್ದಾರೆ. ಇದು ತುಂಬಾ ಅದ್ಭುತವಾಗಿದೆ. ಇದೊಂದು ಮೈಲಿಗಲ್ಲೇ ಸರಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಶ್ವೇತಭವನದಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆ ವೇಳೆ ಬೈಡನ್ ಈ ಬಗ್ಗೆ ಮಾತನಾಡಿದ್ದು, ಸುನಕ್ ಗುಣಗಾನ ಮಾಡಿದ್ದಾರೆ. ಶ್ವೇತಭವನದಲ್ಲಿ ದೀಪಾವಳಿ ನಿಮಿತ್ತ ಸೋಮವಾರ ದೀಪಾವಳಿ ಸಮಾರಂಭ ಆಯೋಜನೆ ಮಾಡಿತ್ತು. ಈ ವಿಶೇಷ ದೀಪಾವಳಿ ಸಂಭ್ರಮದಲ್ಲಿ ಬೈಡನ್ ಸಂಪುಟದಲ್ಲಿ ಹಾಗೂ ಆಡಳಿತದಲ್ಲಿ ಇರುವ ಹಲವಾರು ಭಾರತೀಯ-ಅಮೆರಿಕನ್ನರ ಉಪಸ್ಥಿತಿಗೆ ವೇದಿಕೆ ಒದಗಿಸಿತ್ತು.
ಇದನ್ನು ಓದಿ:ಶ್ವೇತಭವನದಲ್ಲಿ ದೀಪಾವಳಿ ಹಬ್ಬ ಆಚರಿಸಿದ ಜೋ ಬೈಡನ್.. ಕಮಲಾ ಹ್ಯಾರಿಸ್
ಶ್ವೇತಭವನದಲ್ಲಿ ನಡೆಯುತ್ತಿರುವ ಈ ಪ್ರಮಾಣದ ಮೊದಲ ದೀಪಾವಳಿ ಸಂಭ್ರಮದ ಸಮಾರಂಭ ಇದಾಗಿದೆ. ನಾವು ಇತಿಹಾಸದಲ್ಲಿ ಎಂದಿಗಿಂತಲೂ ಹೆಚ್ಚು ಏಷ್ಯನ್ ಅಮೆರಿಕನ್ನರನ್ನು ಹೊಂದಿದ್ದೇವೆ ಮತ್ತು ದೀಪಾವಳಿಯನ್ನು ಅಮೇರಿಕನ್ ಸಂಸ್ಕೃತಿಯ ಸಂತೋಷದಾಯಕ ಭಾಗವನ್ನಾಗಿ ಮಾಡಿದ್ದಕ್ಕಾಗಿ ನಾವು ನಿಮಗೆ ಧನ್ಯವಾದ ಹೇಳಲು ಬಯಸುತ್ತೇವೆ ಎಂದು ಬೈಡನ್ ಹೇಳಿದ್ದಾರೆ.
ಅಮೆರಿಕ, ಭಾರತ ಮತ್ತು ಪ್ರಪಂಚದಾದ್ಯಂತ ದೀಪಗಳ ಹಬ್ಬವನ್ನು ಆಚರಿಸುವ ಶತಕೋಟಿಗೂ ಹೆಚ್ಚು ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ ದೀಪಾವಳಿ ಶುಭಾಶಯಗಳನ್ನು ಅಮೆರಿಕ ಅಧ್ಯಕ್ಷರು ಇದೇ ವೇಳೆ ಕೋರಿದರು.
ನಾವು ಅಧಿಕೃತವಾಗಿ ಶ್ವೇತಭವನದ ದೀಪಾವಳಿ ಆಯೋಜಿಸುತ್ತಿರುವಾಗ, ಅಮೆರಿಕದ ಇತಿಹಾಸದಲ್ಲಿ ಅತ್ಯಂತ ವೈವಿಧ್ಯಮಯ ಆಡಳಿತದ ಸದಸ್ಯರಲ್ಲಿ ಮೊದಲಿಗರಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ನೇತೃತ್ವದಲ್ಲಿ ಹಬ್ಬದ ಆಚರಣೆ ಮಾಡುತ್ತಿರುವುದು ಇನ್ನೂ ಹೆಮ್ಮೆಯ ವಿಷಯ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.
ಇದನ್ನು ಓದಿ:ದೇಶಕ್ಕಾಗಿ ಹಗಲಿರುಳು ಶ್ರಮಿಸುವೆ: ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ವಾಗ್ದಾನ