ವಾಷಿಂಗ್ಟನ್(ಅಮೆರಿಕ): ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧಿಕಾರದಲ್ಲಿ ಉಳಿಯಬಾರದು ಎಂದು ಹೇಳಿಕೆ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗ ಆ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ನಾನು ಈ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ. ನಾನು ನನ್ನ ನೈತಿಕ ಆಕ್ರೋಶವನ್ನು ಹೊರಹಾಕಿದ್ದೇನೆ ಅಷ್ಟೇ. ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದೇನೆ ಎಂದು ಜೋ ಬೈಡನ್ ಹೇಳಿದ್ದಾರೆ.
ಶ್ವೇತಭವನದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಕ್ರೂರತೆಯಾಗಿದೆ. ಉಕ್ರೇನ್‌ನ ಸಂತ್ರಸ್ತ ಮಕ್ಕಳೊಂದಿಗೆ ಮತ್ತು ಕುಟುಂಬಗಳೊಂದಿಗೆ ನಾನಿದ್ದೇನೆ. ಈ ಹೇಳಿಕೆಗೆ ಸಂಬಂಧಿಸಿದಂತೆ ನಾನು ಕ್ಷಮೆಯಾಚಿಸುವುದಿಲ್ಲ. ಅಮೆರಿಕದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪುಟಿನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಾವು ಯಾವುದೇ ರೀತಿಯಲ್ಲಿ ಪ್ರಯತ್ನಿಸುತ್ತೇವೆ ಎಂಬುದು ನನ್ನ ಹೇಳಿಕೆಯ ಅರ್ಥವಲ್ಲ ಎಂದು ಬೈಡನ್ ಹೇಳಿದ್ದಾರೆ.
ಕಳೆದ ವಾರವಷ್ಟೇ ಪೋಲೆಂಡ್‌ನ ವಾರ್ಸಾ ನಗರದಲ್ಲಿ ಉಕ್ರೇನ್‌ನ ಸಚಿವರೊಂದಿಗೆ ಉಕ್ರೇನ್ ಪರ ಒಗ್ಗಟ್ಟನ್ನು ಪ್ರದರ್ಶಿಸುವ ಸಲುವಾಗಿ ಮಾಡಿದ ಭಾಷಣವೊಂದರಲ್ಲಿ ಜೋ ಬೈಡನ್ ಪುಟಿನ್ ವಿರುದ್ಧ ಕಿಡಿ ಕಾರಿದ್ದರು. ಪುಟಿನ್ ವಿಶ್ವದಾದ್ಯಂತ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಬೆಂಬಲದ ವಿಚಾರದಲ್ಲಿ ತಮ್ಮ ದೇಶದಲ್ಲಿಯೂ ಏನಾಗುತ್ತಿದೆ ಎಂಬುದು ಪುಟಿನ್ಗೆ ಗೊತ್ತು. ದೇವರ ಇಚ್ಛೆಯಂತೆ, ಪುಟಿನ್ ಅಧಿಕಾರದಲ್ಲಿ ಉಳಿಯುವುದು ಸಾಧ್ಯವಿಲ್ಲ ಎಂದು ಜೋ ಬೈಡನ್ ಹೇಳಿದ್ದರು.