ವಿವಿಧ ಕಾರಣಗಳಿಗೋಸ್ಕರ ಆಸ್ಟ್ರೇಲಿಯಾದ ಸಾರ್ವತ್ರಿಕ ಚುನಾವಣೆ ಸುದ್ದಿಯಲ್ಲಿರುತ್ತದೆ. ಆದ್ರೆ ಈ ಬಾರಿ ಚುನಾವಣೆಯ ಸಂದರ್ಭದಲ್ಲಿ ನಡೆದ ಇದೊಂದು ವಿದ್ಯಮಾನ ಅಚ್ಚರಿ ಮತ್ತು ಕುತೂಹಲಕ್ಕೂ ಕಾರಣವಾಯಿತು. ಜನರು ತಮ್ಮ ಒಳಉಡುಪುಗಳಲ್ಲೇ ಮತಗಟ್ಟೆಗೆ ಆಗಮಿಸಿ ಓಟ್ ಮಾಡಿದ್ದೇ ಇದಕ್ಕೆ ಕಾರಣ. ಹಾಗಂತ ವಾತಾವರಣದಲ್ಲಿ ಕಂಡು ಬಂದ ತಾಪಮಾನದ ಏರಿಕೆಯೇ ಇದಕ್ಕೆ ಕಾರಣವೇ?. ಸೆಖೆ ತಾಳಲಾರದೆ ಜನರು ಹೀಗೆ ಮಾಡಿದ್ರಾ? ಅಂದರೆ ಖಂಡಿತಾ ಅಲ್ಲ. ಕಾರಣವೇನು ಗೊತ್ತೇ? ಇದೊಂದು ಬ್ರ್ಯಾಂಡ್ ಪ್ರಮೋಷನ್. ಹೌದು. ಸ್ವಿಮ್‌ವೇರ್ ಅಥವಾ ಈಜುಡುಗೆ ಬ್ರ್ಯಾಂಡ್‌ವೊಂದರ ಪಿಆರ್ ಅಭಿಯಾನವಿದು. ಒಂದು ವಸ್ತುವಿನ ಮಾರಾಟಕ್ಕೋಸ್ಕರ ಹೀಗೂ ಮಾಡಬಹುದೇನೋ ಅನ್ನೋದಕ್ಕೆ ಇದೊಂದು ಲೇಟೆಸ್ಟ್ ನಿದರ್ಶನವಾಯಿತು.
ಬಡ್ಜ್ ಸ್ಮಗ್ಲರ್ ಎಂಬ ಕಂಪನಿ ತನ್ನ ಈಜುಡುಗೆಯ ಅಭಿಯಾನಕ್ಕೆ ಸಾರ್ವತ್ರಿಕ ಚುನಾವಣೆಯನ್ನೇ ವೇದಿಕೆಯನ್ನಾಗಿ ಬಳಸಿಕೊಂಡು ವಿಶೇಷವಾಗಿ ಹುಬ್ಬೇರಿಸಿತು. ಇದಕ್ಕೆ ಸಂಬಂಧಿಸಿದಂತೆ ಇನ್ಸ್‌ಟಾಗ್ರಾಂ ಪೋಸ್ಟ್‌ವೊಂದರಲ್ಲಿ ಬ್ರ್ಯಾಂಡ್ ಹೀಗೆ ಬರೆದಿತ್ತು. 'ಈ ಬಾರಿಯ ಚುನಾವಣೆ ಬೇಸಿಗೆಯ ಏರುತ್ತಿರುವ ತಾಪಮಾನದಲ್ಲಿ ಬಂದಿದೆ. ನೀವು ಯಾರಿಗೆ ವೋಟ್ ಮಾಡುವಿರಿ ಅನ್ನೋದು ನಮಗೆ ಬೇಕಿಲ್ಲ. ಆದ್ರೆ ನೀವು ಒಳಉಡುಪು ಧರಿಸದೇ ನಿಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುವುದನ್ನು ನಾವು ಅಪೇಕ್ಷಿಸುವುದಿಲ್ಲ' ಎಂದು ತಮಾಷೆಯಾಗಿ ಹೇಳಿದೆ.