ಸಿಡ್ನಿ(ಆಸ್ಟ್ರೇಲಿಯಾ):ಎಷ್ಟೇ ಫಿಟ್ ಇದ್ದರೂ ಅಬ್ಬಬ್ಬಾ ಅಂದ್ರೂ ಒಂದು ನೂರು ಪುಲ್ ಅಪ್ ಮಾಡಬಹುದು. ಆದರೆ ಇಲ್ಲೊಬ್ಬ ಪರೋಪಕಾರಿ ತನ್ನ ಕನಸನ್ನು ನನಸಾಗಿಸಲು 24 ಗಂಟೆ ಅವಧಿಯಲ್ಲಿ 8,008 ಬಾರಿ ಪುಲ್ ಅಪ್ ಮಾಡಿ ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾನೆ. ವಿಷಯ ಇಷ್ಟೇ ಅಲ್ಲ. ಈತ ಇಷ್ಟೆಲ್ಲಾ ಮಾಡಿದ್ದು ಬುದ್ಧಿಮಾಂದ್ಯ ಚಾರಿಟಿಗೆ ಹಣ ಸಂಗ್ರಹಿಸಲು ಎಂಬುದು ಇಲ್ಲಿ ವಿಶೇಷ.
ಆಸ್ಟ್ರೇಲಿಯಾದ ಫಿಟ್‌ನೆಸ್ ಉತ್ಸಾಹಿ ಜಾಕ್ಸನ್ ಇಟಾಲಿಯನ್ ಈ ಸಾಧನೆ ಮಾಡಿದವರು. ಸಿಡ್ನಿ ನಿವಾಸಿಯಾದ ಈತ ಹರೆಯದರಲ್ಲೇ ಶಿಖರಪ್ರಾಯ ಸಾಧನೆ ಮಾಡಿದ್ದಾನೆ. ಇನ್ನೊಂದು ಜೀವಕ್ಕಾಗಿ ಮಿಡಿಯುವ ಈತನ ಗುಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ನ್ಯೂಸೌತ್ ವೇಲ್ಸ್ನಲ್ಲಿರುವ ಲಾಭರಹಿತ ಬುದ್ಧಿಮಾಂದ್ಯ ಸಂಸ್ಥೆಯಲ್ಲಿ 4 ಲಕ್ಷ ಜನರಿದ್ದು, ಅವರಿಗೆ ಅಗತ್ಯವಿರುವ ಚಿಕಿತ್ಸೆಗಾಗಿ ಜಾಕ್ಸನ್ ಇಟಾಲಿಯನ್ ಹಣ ಸಂಗ್ರಹಿಸಲು ಇಚ್ಚಿಸಿದ್ದ. ತನ್ನ ಶಕ್ತಿಯಾದ ಫಿಟ್‌ನೆಸ್ ಅನ್ನೇ ಬಳಸಿಕೊಂಡ ಜಾಕ್ಸನ್ ಪುಲ್ ಅಪ್ ಚಾಲೆಂಜ್ ಆಯ್ದುಕೊಂಡಿದ್ದಾನೆ. ಒಂದು ಪುಲ್ ಅಪ್‌ಗೆ 1 ಡಾಲರ್ ನೀಡಲು ದಾನಿಗಳಲ್ಲಿ ಕೋರಿದ್ದ.
ಅದರಂತೆ ಜಾಕ್ಸನ್, 24 ಗಂಟೆ ಅವಧಿಯಲ್ಲಿ ಮೂರೂವರೆ ಗಂಟೆಗಳ ವಿಶ್ರಾಂತಿಯನ್ನು ಪಡೆದುಕೊಂಡು, ಇಪ್ಪತ್ತೂವರೆ ಗಂಟೆಗಳಲ್ಲಿ 8008 ಬಾರಿ ಪುಲ್ ಅಪ್ ಮಾಡಿದ್ದಾನೆ. ಇಂತಹ ಸಾಹಸಕ್ಕೆ ಕೈ ಹಾಕಿದ ಯುವಕ ದೇಣಿಗೆಯಾಗಿ 5,914.72 ಸಂಗ್ರಹಿಸಿದ್ದಾನೆ. ಇಷ್ಟಲ್ಲದೇ ಸತತ 24 ಗಂಟೆ ಅವಧಿಯಲ್ಲಿ ಇಷ್ಟು ಪ್ರಮಾಣದಲ್ಲಿ ಯಾರೂ ಮಾಡದ ಸಾಧನೆ ತೋರಿ ಗಿನ್ನೆಸ್ ವಿಶ್ವದಾಖಲೆಯ ಪುಟವನ್ನೂ ಸೇರಿದ್ದಾನೆ.
ಪ್ರತಿ ಪುಲ್ ಅಪ್‌ಗೆ 1 ಡಾಲರ್ ಗುರಿ ಹೊಂದಿದ್ದ ಜಾಕ್ಸನ್ 3 ಗಂಟೆ ವಿಶ್ರಾಂತಿ ಪಡೆದ ಕಾರಣ ಅದು 0.66 ಡಾಲರ್ ಬೆಲೆ ಸಿಕ್ಕಿದೆ. ತಾವು ಸಂಗ್ರಹಿಸಿದ ಅಷ್ಟೂ ಮೊತ್ತವನ್ನು ಬುದ್ಧಿಮಾಂದ್ಯ ಚಾರಿಟಿಗೆ ನೀಡುವುದಾಗಿ ಘೋಷಿಸಿದ್ದಾರೆ. ಜಾಕ್ಸನ್ ಇಟಾಲಿಯನ್ರ ಸಾಧನೆ ಮತ್ತು ಔದಾರ್ಯ ಕಂಡು ಜನರೇ ಬೆರಗಾಗಿದ್ದಾರೆ.