ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ):ದಕ್ಷಿಣ ಆಫ್ರಿಕಾದ ಅತಿದೊಡ್ಡ ನಗರ ಜೋಹಾನ್ಸ್ಬರ್ಗ್ನಲ್ಲಿ ಗುರುವಾರ ಭೀಕರ ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 73 ಜನರು ಸಾವಿಗೀಡಾಗಿದ್ದಾರೆ. ಸುಮಾರು 52 ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ನಗರದ ಮಧ್ಯಭಾಗದಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ತಡರಾತ್ರಿ 1:30ರ ಸುಮಾರಿಗೆ ಅವಘಡ ಉಂಟಾಯಿತು. ಇದುವರೆಗೆ 64 ಮೃತದೇಹಗಳು ಪತ್ತೆಯಾಗಿವೆ. ಸ್ಥಳದಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ. ದುರಂತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಜೋಹಾನ್ಸ್‌ಬರ್ಗ್ ನಗರ ತುರ್ತು ಸೇವೆಗಳ ವಕ್ತಾರ ರಾಬರ್ಟ್ ಮುಲೌಡ್ಜಿ ಪ್ರತಿಕ್ರಿಯಿಸಿ, "ಇಲ್ಲಿನ ಡೆಲ್ವರ್ಸ್ ಮತ್ತು ಆಲ್ಬರ್ಟ್ಸ್ ರಸ್ತೆಗಳ ಮೂಲೆಯಲ್ಲಿರುವ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ. ರಾತ್ರಿ 1:30ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಲಭ್ಯವಾಯಿತು. ತುರ್ತು ಮತ್ತು ರಕ್ಷಣಾ ಪರಿಹಾರ ಸಿಬ್ಬಂದಿ ಹಾಗೂ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು" ಎಂದು ತಿಳಿಸಿದ್ದಾರೆ.
"ಅಗ್ನಿ ದುರಂತದಲ್ಲಿ ಬಹುಪಾಲು ಕಟ್ಟಡ ಸುಟ್ಟು ಹೋಗಿದೆ. ಇದರಲ್ಲಿ ಸಿಲುಕಿದ್ದ ಜನರನ್ನು ಸ್ಥಳಾಂತರ ಮಾಡುವುದೊಂದಿಗೆ ಮೃತದೇಹಗಳನ್ನು ಹೊರೆತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ. ಇದುವರೆಗೆ 43 ಮಂದಿಯನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ. ಇವರ ಪೈಕಿ ಕೆಲವರು ಸುಟ್ಟ ಗಾಯಗಳಿಂದ ಬಳಲುತ್ತಿದ್ದರೆ, ಹಲವರು ದಟ್ಟ ಹೊಗೆಯಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ಧಾರೆ" ಎಂದರು.
ಬಹುಮಹಡಿ ಕಟ್ಟಡ ವಲಸಿಗರಿಂದಲೇ ತುಂಬಿತ್ತು. ಈ ಹಿಂದೆ ಗಲಭೆಗಳ ಸಂದರ್ಭದಲ್ಲಿ ಕ್ರಿಮಿನಲ್‌ಗಳಿಂದ ಅಕ್ರಮಿಸಲ್ಪಟ್ಟ ಕಟ್ಟಡಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ವಿದ್ಯುತ್, ನೀರು ಸೇರಿ ಯಾವುದೇ ಮೂಲ ಸೌಕರ್ಯಗಳನ್ನು ಪುರಸಭೆ ಒದಗಿಸಿಲ್ಲ. ಕಟ್ಟಡದೊಂದಿಗೆ ಸಣ್ಣ ಗುಂಪುಗಳಾಗಿ ನೂರಾರು ಜನರು ವಾಸ ಮಾಡುತ್ತಿದ್ದಾರೆ. ಬಹುತೇಕರು ಅಕ್ರಮ ವಲಸಿಗರೇ ಆಗಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿನ ವಾಸವಾಗಿರುವ ಬಹುಪಾಲು ಜನ ಬೆಳಕಿಗಾಗಿ ಮೇಣದಬತ್ತಿಗಳನ್ನು ಬಳಸುತ್ತಾರೆ. ಅಲ್ಲದೇ, ಸಣ್ಣ ಪ್ಯಾರಾಫಿನ್ ಸ್ಟೌವ್ಗಳಲ್ಲಿ ಅಡುಗೆ ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ಹಳೆಯ ಸ್ಟೀಲ್ ಡ್ರಮ್ಗಳಲ್ಲಿ ಬೆಂಕಿ ಹಾಕಿ, ಅವುಗಳಲ್ಲೇ ಅಡುಗೆ ಮಾಡಲು ಉಪಯೋಗಿಸುತ್ತಾರೆ. ಚಿಕ್ಕ ಮಕ್ಕಳು ಸಹ ಇಲ್ಲಿ ವಾಸವಾಗಿದ್ದು, ಕಟ್ಟಡಕ್ಕೆ ಬೆಂಕಿ ಬಿದ್ದ ಕಾರಣ ಅನೇಕರು ಜೀವಂತವಾಗಿ ಹೊರಬರುವ ಭರವಸೆ ಇಲ್ಲ. ಅಗ್ನಿಶಾಮಕ ಸಿಬ್ಬಂದಿ ಒಂದೊಂದಾಗಿ ಮೃತದೇಹಗಳನ್ನು ಹೊರತರುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ:ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ.. 6 ಜನರ ಹತ್ಯೆ