ಕಾಬೂಲ್ (ಅಫ್ಘಾನಿಸ್ತಾನ): ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಅಫ್ಘಾನಿಸ್ತಾನದ ಖ್ಯಾತ ಗಾಯಕಿ ಹಸಿಬಾ ನೂರಿ ಅವರು ಖೈಬರ್ ಪಖ್ತುನಖ್ವಾ ಪ್ರಾಂತ್ಯದಲ್ಲಿ ಅಪರಿಚಿತ ದುಷ್ಕರ್ಮಿಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಅಫ್ಘಾನಿಸ್ತಾನ ಮೂಲದ ಟಿವಿ ವರದಿ ಮಾಡಿದೆ. ಘಟನೆಯ ಕುರಿತು ಪಾಕಿಸ್ತಾನ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ಸ್ನೇಹಿತ ಮತ್ತು ಸಹ ಗಾಯಕ ಖೋಸ್ಬೋ ಅಹ್ಮದಿ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ನೂರಿ ಅವರ ಸಾವನ್ನು ಖಚಿತಪಡಿಸಿದ್ದಾರೆ. ಆದಾಗ್ಯೂ, ಆಕೆಯ ಸಾವಿನ ಸಂದರ್ಭಗಳ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ. ಸುಮಾರು ಒಂದು ವರ್ಷದ ಹಿಂದೆ ಅಫ್ಘಾನಿಸ್ತಾನ ತೊರೆದ ನಂತರ ನೂರಿ ಇಸ್ಲಾಮಾಬಾದ್‌ನಲ್ಲಿ ಆಶ್ರಯ ಪಡೆದಿದ್ದಳು. ಅಲ್ಲಿ ಅವಳು ಕ್ರಮೇಣ ತನ್ನ ಕಲಾ ಚಟುವಟಿಕೆಗಳನ್ನು ಪುನರಾರಂಭಿಸಿದ್ದಳು. ಆಧುನಿಕ ಶೈಲಿಯಲ್ಲಿ ಸಾಂಪ್ರದಾಯಿಕ ಜಾನಪದ ಗೀತೆಗಳನ್ನು ಹಾಡುವುದಕ್ಕಾಗಿ ನೂರಿ ಪ್ರಸಿದ್ಧಳಾಗಿದ್ದಳು.
ಕೆಲ ವರದಿಗಳ ಪ್ರಕಾರ ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ಹಸಿಬಾ ನೂರಿ ವರ್ಷದ ಹಿಂದೆ ಅಫ್ಘಾನಿಸ್ತಾನದಿಂದ ಓಡಿಹೋಗಿ ನಿರಾಶ್ರಿತರಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದರು. ಮಹಿಳೆಯರ ಹಕ್ಕುಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿರುವ ತಾಲಿಬಾನ್ ಆಡಳಿತದ ಅಡಿಯಲ್ಲಿ ತಮ್ಮ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಭಯಭೀತರಾಗಿ ದೇಶವನ್ನು ತೊರೆದ ಅನೇಕ ಅಫ್ಘಾನ್ ಕಲಾವಿದರು ಮತ್ತು ಸೆಲೆಬ್ರಿಟಿಗಳಲ್ಲಿ ಅವರೂ ಒಬ್ಬರು.