ಪೇಶಾವರ (ಪಾಕಿಸ್ತಾನ) :ಭಯೋತ್ಪಾದಕರ ಆಶ್ರಯತಾಣವಾದ ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ಅಂಗಸಂಸ್ಥೆಗಳು ಭೀಕರ ದಾಳಿ ನಡೆಸಿದ್ದು, 23 ಸೈನಿಕರು ಹತರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ದಾರಬನ್ ಪ್ರದೇಶದಲ್ಲಿನ ಭದ್ರತಾ ಪಡೆಗಳ ಪೋಸ್ಟ್ ಮೇಲೆ 6 ಭಯೋತ್ಪಾದಕರ ಗುಂಪು ಈ ವಿಧ್ವಂಸಕ ಕೃತ್ಯ ನಡೆಸಿದೆ. ಪ್ರತಿದಾಳಿಯಲ್ಲಿ ಎಲ್ಲ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ತಾಲಿಬಾನ್ ಅಂಗಸಂಸ್ಥೆಯೊಂದಿಗೆ ನಂಟು ಹೊಂದಿರುವ ಉಗ್ರರು ಮಂಗಳವಾರ ಖೈಬರ್ ಫಖ್ತುಂಖ್ವಾದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಪೋಸ್ಟ್‌ಗೆ ಸ್ಫೋಟಕ ತುಂಬಿದ ಟ್ರಕ್ ಅನ್ನು ಡಿಕ್ಕಿ ಹೊಡೆಸಿದರು. ಬಳಿಕ ಮತ್ತೊಂದು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಇದರಿಂದ ದೊಡ್ಡ ಕಟ್ಟಡ ಕುಸಿತ ಉಂಟಾಗಿದೆ. ಜೊತೆಗೆ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.
ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ಉಗ್ರ ಸಂಘಟನೆಯ ಹೊಸ ರೂಪವಾದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಾಳಿಯ ಹೊಣೆ ಹೊತ್ತುಕೊಂಡಿದೆ. ಇದು ತಾಲಿಬಾನ್ ಉಗ್ರ ಸಂಘಟನೆಯ ಅಂಗಸಂಸ್ಥೆಯಾಗಿದೆ. ಟಿಜೆಪಿ ವಕ್ತಾರ ಮುಲ್ಲಾ ಖಾಸಿಂ ಈ ದಾಳಿಯನ್ನು ಆತ್ಮಹತ್ಯಾ ಕಾರ್ಯಾಚರಣೆ (ಫಿದಾಯಿನ್) ಎಂದು ಕರೆದಿದ್ದಾನೆ.
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ:ದಾಳಿಯ ಬಳಿಕ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಗಾಯಾಳುಗಳು ಸ್ಥಿತಿ ಚಿಂತಾಜನಕವಾಗಿದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಿಂದಾಗಿ ಎಲ್ಲಾ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಇದಕ್ಕೂ ಮುನ್ನ ಇದೇ ವರ್ಷದ ನವೆಂಬರ್ 4 ರಂದು, ಟಿಜೆಪಿ ಉಗ್ರರು ಲಾಹೋರ್‌ನಿಂದ ಸುಮಾರು 300 ಕಿಮೀ ದೂರದಲ್ಲಿರುವ ಪಾಕಿಸ್ತಾನದ ವಾಯುಪಡೆಯ ಮಿಯಾನ್‌ವಾಲಿ ತರಬೇತಿ ವಾಯುನೆಲೆಯ ಮೇಲೆ ದಾಳಿ ಮಾಡಿದ್ದರು. ಮೂರು ವಿಮಾನಗಳನ್ನು ನೆಲಸಮ ಮಾಡಿದ್ದರು. ಮೂರು ಪ್ರತ್ಯೇಕ ಭಯೋತ್ಪಾದಕ ದಾಳಿಗಳಲ್ಲಿ 17 ಸೈನಿಕರು ಹತರಾಗಿದ್ದರು. ಇದರ ನಂತರ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಎಲ್ಲ ದಾಳಿಕೋರರು ಕೊಲ್ಲಲ್ಪಟ್ಟರು. ಜುಲೈನಲ್ಲಿ ಟಿಜೆಪಿ ಉಗ್ರಗಾಮಿಗಳು ಬಲೂಚಿಸ್ತಾನ್ ಪ್ರಾಂತ್ಯದ ಝೋಬ್ ಗ್ಯಾರಿಸನ್ ಮೇಲೆ ದಾಳಿ ಮಾಡಿದ್ದರು. ಇಲ್ಲಿ ನಾಲ್ವರು ಸೈನಿಕರನ್ನು ಹತರಾಗಿ, ಐವರು ಗಾಯಗೊಂಡಿದ್ದರು.
ತಾಲಿಬಾನ್ ಕಾಟ ಹೆಚ್ಚಳ:2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಪಾಕಿಸ್ತಾನದಲ್ಲಿ ಉಗ್ರ ದಾಳಿಗಳು ಹೆಚ್ಚಾಗಿವೆ. ವರ್ಷವಿಡೀ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತಿದೆ. ಭದ್ರತಾ ಪಡೆಗಳನ್ನೇ ಉಗ್ರರು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬಲೂಚಿಸ್ತಾನದಲ್ಲಿ ಉಗ್ರರ ದಾಳಿ: ಮೂವರು ಪಾಕ್ ಸೈನಿಕರ ಹತ್ಯೆ