ಗಾಜಾ (ಪ್ಯಾಲೆಸ್ತೀನ್): ಪ್ಯಾಲೆಸ್ತೀನ್ ಪ್ರತಿಭಟನಾಕಾರರು ಮತ್ತು ಇಸ್ರೇಲ್ ಸೈನಿಕರ ನಡುವೆ ಕಳೆದ ರಾತ್ರಿ ನಡೆದ ಘರ್ಷಣೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಕಳೆದ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಪೂರ್ವ ಗಾಜಾ ಪಟ್ಟಿ ಮತ್ತು ಇಸ್ರೇಲ್ ಗಡಿಯಲ್ಲಿ ಘರ್ಷಣೆ ಪುನರಾರಂಭಗೊಂಡಿದೆ. ರಾತ್ರಿ ವೇಳೆ ಆಗಮಿಸಿದ ಪ್ರತಿಭಟನಾಕಾರರು ಟೈರ್ಗಳನ್ನು ಸುಟ್ಟು ಹಾಕಿ, ಬಳಿಕ ನಾಡ ಬಂದೂಕುಗಳ ಮೂಲಕ ಇಸ್ರೇಲ್ ಸೈನಿಕ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಇಸ್ರೇಲ್ ಸೈನಿಕರು ಗುಂಡು ಹಾರಿಸಿ, ಸಣ್ಣ ಡ್ರೋನ್‌ಗಳ ಸಹಾಯದಿಂದ ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದರು. ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸಿದರು. ಇದೇ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 7 ಮಂದಿ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಒರ್ವನ ತಲೆಗೆ ಗುಂಡು ತಗುಲಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.