ಲಂಡನ್: ಬಡಪಾಯಿ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾ ವಿರುದ್ಧ ಅಂತಾರಾಷ್ಟ್ರೀಯ ಒಕ್ಕೂಟ ರಚನೆ ಹಾಗೂ ತೈಲ, ಅನಿಲ ರಫ್ತಿನ ಮೇಲಿನ ಅವಲಂಬನೆಯನ್ನು ತೊಡೆದು ಹಾಕುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಣೆ ಮಾಡಿದ್ದಾರೆ.
ಇಂದು ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಯುಕೆ ಪ್ರಧಾನಿ ಬೋರಿಸ್ ಇಂತಹ ನಿರ್ಧಾರವನ್ನು ಕೈಗೊಂಡಿದ್ದಾರೆ. ಉಕ್ರೇನ್ ಬಿಕ್ಕಟ್ಟಿನ ಮೇಲೆ ಜಾಗತಿಕ ಕ್ರಮವನ್ನು ಉತ್ತೇಜಿಸಲು ಬ್ರಿಟನ್ ಪ್ರಯತ್ನದ ಭಾಗವಾಗಿ ಪ್ರಾದೇಶಿಕ ಭದ್ರತೆ ಮತ್ತು ಮಾನವೀಯ ಪರಿಹಾರದ ಕುರಿತು ಮಾತುಕತೆಗಾಗಿ ಜಾನ್ಸನ್ ಅಬುಧಾಬಿ ಮತ್ತು ರಿಯಾದ್‌ನಲ್ಲಿ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಇಂಧನ ಭದ್ರತೆ ಸುಧಾರಿಸಲು ಮತ್ತು ಜಾಗತಿಕ ಇಂಧನ ಮತ್ತು ಆಹಾರ ಬೆಲೆಗಳಲ್ಲಿನ ಚಂಚಲತೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ನಾಯಕರು ಚರ್ಚಿಸುವ ನಿರೀಕ್ಷೆಯಿದೆ.
ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ನಡೆಸಿದ ಕ್ರೂರ ಮತ್ತು ಅಪ್ರಚೋದಿತ ದಾಳಿಯು ಯುರೋಪಿನ ಗಡಿ ಮೀರಿ ಜಗತ್ತಿಗೆ ಪರಿಣಾಮಗಳನ್ನು ಬೀರುತ್ತದೆ ಎಂದು ಜಾನ್ಸನ್ ಹೇಳಿದ್ದಾರೆ. ಹೊಸದಾಗಿ ಎದುರಾಗಿರುವ ಸವಾಲುಗಳಿಂದಾಗಿ ಇಂಗ್ಲೆಂಡ್, ಈ ಸಂಬಂಧ ಅಂತಾರಾಷ್ಟ್ರೀಯ ಒಕ್ಕೂಟವನ್ನು ನಿರ್ಮಿಸುತ್ತಿದೆ. ಪ್ರಪಂಚವು ರಷ್ಯಾದ ಹೈಡ್ರೋಕಾರ್ಬನ್‌ಗಳನ್ನು ಹೊರಹಾಕಬೇಕು. ತೈಲ ಮತ್ತು ಅನಿಲ ಆಮದಿನಿಂದ ಪುಟಿನ್ ಸರ್ಕಾರವನ್ನ ದೂರವಿಡಬೇಕು ಎಂದು ಕರೆ ನೀಡಿದ್ದಾರೆ.
ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಆ ಪ್ರಯತ್ನದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಪಾಲುದಾರರು. ಪ್ರಾದೇಶಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಮಾನವೀಯ ಪರಿಹಾರ ಪ್ರಯತ್ನವನ್ನು ಬೆಂಬಲಿಸಲು ಮತ್ತು ದೀರ್ಘಾವಧಿಗೆ ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:'ರಷ್ಯಾ ಅಧ್ಯಕ್ಷ ಪುಟಿನ್ ವಾರ್ ಕ್ರಿಮಿನಲ್'; ಅಮೆರಿಕ ಸೆನೆಟ್‌ನಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ