ಮಾಸ್ಕೋ: ಕೋವಿಡ್ ವಿರುದ್ಧ ಲಸಿಕೆ ಪಡೆದ ನಂತರ ಕನಿಷ್ಠ ಮೂರು ದಿನಗಳವರೆಗೆ ಲೈಂಗಿಕ ಕ್ರಿಯೆಯಿಂದ ದೂರವಿರಲು ರಷ್ಯಾ ಜನರಿಗೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದಾರೆ.
ರಷ್ಯಾದ ಸೆರಾಟೋವ್ ಪ್ರದೇಶದ ಉಪ ಆರೋಗ್ಯ ಸಚಿವ ಡಾ.ಡೆನಿಸ್ ಗ್ರೇಫರ್, ಲಸಿಕೆ ಪಡೆದ ನಂತರ ದೈಹಿಕ ಒತ್ತಡದಿಂದ ದೂರವಿರಬೇಕು. ಹೀಗಾಗಿ ಲೈಂಗಿಕತೆ ಸೇರಿದಂತೆ ದೈಹಿಕ ಒತ್ತಡಕ್ಕೆ ಸಂಬಂಧಿಸಿದ ಕ್ರಿಯೆಗಳಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ.
ವ್ಯಾಕ್ಸಿನ್ ಪಡೆದ ರಷ್ಯನ್ನರು ವೊಡ್ಕಾ, ಧೂಮಪಾನ, ಬಿಸಿ ನೀರಿನ ಹಬೆ ಸ್ನಾನ ಮಾಡದಂತೆ ಈ ಮೊದಲು ತಿಳಿಸಲಾಗಿತ್ತು. ಸದ್ಯ ರಷ್ಯ ವಿಶ್ವದಲ್ಲೇ ಅತಿ ಕಡಿಮೆ ವ್ಯಾಕ್ಸಿನೇಷನ್ ದರವನ್ನು ಹೊಂದಿದೆ. ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿನ ಜನರು ಕೇವಲ ಶೇ 13ದಷ್ಟು ರೋಗನಿರೋಧಕ ಶಕ್ತಿ ಹೊಂದಿದ್ದಾರೆ. ಯುರೋಪ್ ಸರಾಸರಿ 30 ರಷ್ಟು ರೋಗನಿರೋಧಕ ಶಕ್ತಿ ಹೊಂದಿದೆ.
ಲೈಂಗಿಕತೆಯು ತುಂಬಾ ಶಕ್ತಿಯುತವಾದ ಚಟುವಟಿಕೆಯಾಗಿದೆ. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ ಎಂಬುದನ್ನು ನಾನು ನಂಬುತ್ತೇನೆ. ಆದ್ದರಿಂದ ಲಸಿಕೆ ಪಡೆದ ಜನರು ಲೈಂಗಿಕ ಕ್ರಿಯೆ ಸೇರಿದಂತೆ ಹೆಚ್ಚಿನ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಸುತ್ತೇನೆ ಎಂದು ಡಾ.ಗ್ರೇಫರ್ ತಿಳಿಸಿದ್ದಾರೆ.
ಸದ್ಯ ರಷ್ಯಾದಲ್ಲಿ ಸ್ವದೇಶಿ ಸ್ಪುಟ್ನಿಲ್ ವಿ ಲಸಿಕೆಯನ್ನು ನೀಡಲಾಗುತ್ತಿದೆ. ಅದೇ ರೀತಿ ಆಸ್ಟ್ರಾಜೆನಿಕಾ ಕೂಡ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಕೋವಿಡ್‌ನ ಮೂರನೇ ಅಲೆ ಪರಿಣಾಮ ಎದುರಿಸುತ್ತಿರುವ ರಷ್ಯಾಗೆ ಡೆಲ್ಟಾ ಅಥವಾ ಭಾರತೀಯ ರೂಪಾಂತರಿ ಎನ್ನಲಾದ ವೈರಸ್ ಕೂಡ ತಲೆನೋವಾಗಿ ಪರಿಣಮಿಸಿದೆ.