ಡಬ್ಲಿನ್ (ಐರ್ಲೆಂಡ್):ಕೊರೊನಾ ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಲು ಸಾಫ್ಟ್ವೇರ್ ದೈತ್ಯ ಆ್ಯಪಲ್ ಹಾಗೂ ಗೂಗಲ್ ಒಂದು ಆ್ಯಪ್ ತಯಾರಿಸಿದ್ದು ಐರ್ಲೆಂಡ್ ದೇಶದಲ್ಲಿ ಬಿಡುಗಡೆಯಾಗಿದೆ.
ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ಆಧಾರಿತವಾಗಿ ಈ ಆ್ಯಪ್ ರಚಿಸಲಾಗಿದ್ದು, ಇದಕ್ಕೆ ಕೋವಿಡ್ ಟ್ರ್ಯಾಕರ್ ಐರ್ಲೆಂಡ್ ಎಂದು ಹೆಸರಿಡಲಾಗಿದೆ. ಈ ಅಪ್ಲಿಕೇಷನ್ ಆ್ಯಪ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಿಗಲಿದೆ.
ಈ ಅಪ್ಲಿಕೇಷನ್ ಬಳಕೆದಾರನಿಗೆ ಕೊರೊನಾ ಸೋಂಕಿತ ವ್ಯಕ್ತಿ ಸಂಪರ್ಕಕ್ಕೆ ಬಂದ ವೇಳೆ ನೋಟಿಫಿಕೇಷನ್ ಕಳುಹಿಸಿ ಎಚ್ಚರಿಸುತ್ತದೆ ಎಂದು ಹೇಳಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಈ ಅಪ್ಲಿಕೇಷನ್ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತದೆ. ಸೋಂಕಿತ ವ್ಯಕ್ತಿಯ ಸಂಪರ್ಕಿತರನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಲು ಇದು ನೆರವಾಗುತ್ತದೆ. ಈ ಆ್ಯಪ್ ಎಲ್ಲಾ ವ್ಯಕ್ತಿಯ ಮೊಬೈಲ್ನ ಎಲ್ಲಾ ಡೇಟಾವನ್ನು ನಿಯಂತ್ರಿಸುತ್ತದೆ ಎಂದು ಐರ್ಲೆಂಡ್ ಆರೋಗ್ಯ ಸಚಿವ ಸ್ಟೀಫನ್ ಡೊನ್ನೆಲ್ಲಿ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಸೋಂಕಿತರು ತಮ್ಮೊಂದಿಗೆ ಸಂಪರ್ಕ ಹೊಂದಿದ್ದವರನ್ನು ಸ್ವತಃ ತಾವೇ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಈ ಆ್ಯಪ್ ಅತ್ಯಂತ ಪ್ರಬಲ ಸಾಧನವಾಗಲಿದೆ. ಪ್ರತಿಯೊಬ್ಬರೂ ಕೂಡ ಈ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಸ್ಟೀಫನ್ ಡೊನ್ನೆಲ್ಲಿ ಮನವಿ ಮಾಡಿದರು.