ಬ್ರಸೆಲ್ಸ್: ಉಕ್ರೇನ್‌ನಲ್ಲಿ ರಷ್ಯಾದ ಸೇನೆ ಯುದ್ಧಾಪರಾಧ ಎಸಗುತ್ತಿದೆ ಎಂದು ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ಆರೋಪಿಸಿವೆ. ರಷ್ಯಾ ಆಕ್ರಮಿತ ಉಕ್ರೇನಿಯನ್ ಬಂದರು ನಗರ ಮರಿಯುಪೋಲ್‌ನಲ್ಲಿ ನಾಗರಿಕ ಸಾವುಗಳು ಹೆಚ್ಚುತ್ತಿವೆ. ಆಸ್ಪತ್ರೆಗಳು ಮತ್ತು ಚಿತ್ರಮಂದಿರಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೆ ರಷ್ಯಾದ ದಾಳಿಯ ಭೀಕರತೆಯನ್ನು ಜರ್ಮನ್ ವಿದೇಶಾಂಗ ಮಂತ್ರಿ ಅನ್ನಾಲೆನಾ ಬೇರ್‌ಬಾಕ್ ಅವರು ವಿವರಿಸಿದ್ದಾರೆ.
ಈ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯಗಳು ನಿರ್ಧರಿಸಬೇಕು. ಇವು ಸ್ಪಷ್ಟವಾಗಿ ಯುದ್ಧಾಪರಾಧಗಳಾಗಿವೆ ಎಂದು ಅವರು ಹೇಳಿದರು. ಬ್ರಸೆಲ್ಸ್‌ನಲ್ಲಿ ಯುರೋಪಿಯನ್ ಒಕ್ಕೂಟದ ವಿದೇಶಾಂಗ ಮಂತ್ರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಪ್ ಬೊರೆಲ್, ಮಾರಿಯುಪೋಲ್‌ನಲ್ಲಿ ರಷ್ಯಾ ನಡೆಸುತ್ತಿರುವ ಕೃತ್ಯ ಯುದ್ಧಾಪರಾಧವಾಗಿದೆ. ಎಲ್ಲವನ್ನೂ ಧ್ವಂಸಗೊಳಿಸುವುದು, ಬಾಂಬ್ ಸ್ಫೋಟಿಸುವುದು ಮತ್ತು ವಿವೇಚನೆಯಿಲ್ಲದ ರೀತಿಯಲ್ಲಿ ಕೊಲ್ಲುವುದು ಭಯಾನಕ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.