ವರ್ಚುಯಲ್ ಆಗಿ ನಡೆಯಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಚರ್ಚೆಯ ಅಧ್ಯಕ್ಷತೆ ವಹಿಸುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಈಗಾಗಲೇ ಸಭೆ ಆರಂಭಗೊಂಡಿದೆ. ಸಭೆಯಲ್ಲಿ ರಷ್ಯಾ ಅಧ್ಯಕ್ಷರೂ ಪಾಲ್ಗೊಂಡಿದ್ದು, ಈ ದಿನವು ಭಾರತ - ಸೋವಿಯತ್ ಸ್ನೇಹ ಒಪ್ಪಂದವಾದ ದಿನ ಎಂಬುದು ವಿಶೇಷವಾಗಿದೆ.
ಹೌದು.., 1971 ರ ಆಗಸ್ಟ್ 9 ರಂದು, 50 ವರ್ಷಗಳ ಹಿಂದೆ ಈ ದಿನದಂದು ಭಾರತ ಮತ್ತು ಅಂದಿನ ಸೋವಿಯತ್ ಒಕ್ಕೂಟದ ನಡುವೆ ಶಾಂತಿ, ಸ್ನೇಹ ಮತ್ತು ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, "ಇಂದು, 50 ವರ್ಷಗಳ ಹಿಂದೆ ಐತಿಹಾಸಿಕ ಇಂಡೋ-ಸೋವಿಯತ್ ಶಾಂತಿ, ಸ್ನೇಹ ಮತ್ತು ಸಹಕಾರ ಒಪ್ಪಂದಕ್ಕೆ ನವದೆಹಲಿಯಲ್ಲಿ ಸಹಿ ಹಾಕಲಾಯಿತು. ಇದು ಪಾಕಿಸ್ತಾನದೊಂದಿಗಿನ ಯುದ್ಧ ಮತ್ತು ಬಾಂಗ್ಲಾದೇಶದ ವಿಮೋಚನೆಯ ಸಮಯದಲ್ಲಿ ಅನುಸರಿಸಬೇಕಾದ ಉದ್ವಿಗ್ನ ಮತ್ತು ನಿರ್ಣಾಯಕ ಸಮಯದಲ್ಲಿ ಭಾರತದ ಪಾತ್ರವಿರದಂತೆ ಬಲಪಡಿಸಿತು" ಎಂದು ಹೇಳಿದ್ದಾರೆ.
ಅಂದಿನಿಂದ ಇಂದಿನವರೆಗೂ ಭಾರತ ಹಾಗೂ ರಷ್ಯಾ ನಡುವಿನ ಸಂಬಂಧ ಗಟ್ಟಿಯಾಗಿಯೇ ಉಳಿದಿದೆ. ಜಂಟಿ ಸಂಶೋಧನೆ, ಅಭಿವೃದ್ಧಿ, ಆಮದು-ರಫ್ತು, ರಕ್ಷಣಾ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಉಭಯ ರಾಷ್ಟ್ರಗಳ ಸಹಕಾರವಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗಿದೆ.
ಸಭೆಯಲ್ಲಿ ಪಿಎಂ ಮೋದಿಯವರು ಕಡಲ ಭದ್ರತೆಯನ್ನು ಹೆಚ್ಚಿಸಲು ಅಂತಾರಾಷ್ಟ್ರೀಯ ಸಹಕಾರದ ಕುರಿತು ಚರ್ಚಿ ನಡೆಸಲಿದ್ದಾರೆ. ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.