ಟೋಕಿಯೋ( ಜಪಾನ್):ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಠಿಣ ನೀತಿಗಳೇ ಚೀನಾದ ಆರ್ಥಿಕತೆಗೆ ಅಪಾಯವನ್ನು ತಂದೊಡ್ಡಲಿವೆ. ಅವರ ಹಠಾತ್ ಮತ್ತು ತುಂಬಾ ಪ್ರಬಲ ನೀತಿಗಳ ಅಡ್ಡಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸಲಿದೆ ಎಂದು ಜಪಾನ್ನ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಹೇಳಿದೆ.
ಚೀನಾದಲ್ಲಿ ರಿಯಲ್ ಎಸ್ಟೇಟ್ ಬಿಕ್ಕಟ್ಟು, ಕೋವಿಡ್ ಸೋಂಕಿನ ಸಮಸ್ಯೆಯನ್ನು ಎದುರಿಸಲು ಕಷ್ಟವಾದ ನಿಯಮಗಳನ್ನು ಚೀನಾದಲ್ಲಿ ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. ಇದು ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಮ್ಯುನಿಸ್ಟ್ ಪಕ್ಷವು ಈಗಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ವಿಫಲವಾದರೆ, ಅದು ಕ್ಸಿ ಜಿನ್‌ಪಿಂಗ್ ಅವರ ಅಧಿಕಾರದ ಮೇಲೆ ಪರಿಣಾಮ ಬೀರಬಹುದು ಎಂದು ಜಪಾನಿನ ಹಣಕಾಸು ಪತ್ರಿಕೆ 'ನಿಕ್ಕಿ ಏಷ್ಯಾ' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಅತಿ ಆತ್ಮವಿಶ್ವಾಸ ಒಳ್ಳೆಯದಲ್ಲ:ಸೋಮವಾರವಷ್ಟೇ ಜಿಡಿಪಿ ಅಂಕಿ ಅಂಶಗಳನ್ನು ಚೀನಾ ಬಿಡುಗಡೆ ಮಾಡಿದ್ದು, ಈ ವೇಳೆ ಚೀನಾದ ಅರ್ಥಶಾಸ್ತ್ರಜ್ಞರೊಬ್ಬರು ಅತಿ ಆತ್ಮವಿಶ್ವಾಸ ಚೀನಾಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕ ಸ್ಥಿತಿಗತಿಗಳ ವಿಚಾರದಲ್ಲಿ ಅಮೆರಿಕವನ್ನು ಹಿಂದಿಕ್ಕುವ ಭರವಸೆ ದಿನದಿಂದ ದಿನಕ್ಕೆ ದೂರ ಸರಿಯುತ್ತಿದೆ. ಹತ್ತಿರ ಬರುತ್ತಿಲ್ಲ ಎಂದಿದ್ದಾರೆ.