ಕಾಬೂಲ್ (ಅಫ್ಘಾನಿಸ್ತಾನ):ಅಫ್ಘಾನಿಸ್ತಾನದಲ್ಲಿ ಉಸ್ತುವಾರಿ ಸರ್ಕಾರ ರಚಿಸಲು ತಾಲಿಬಾನ್ ನಿರ್ಧರಿಸಿದೆ ಎಂದು ತಾಲಿಬಾನ್ ಸದಸ್ಯರೊಬ್ಬರು ಪಾಕಿಸ್ತಾನ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ನಲ್ಲಿ ಅಫ್ಘನ್ ಅನ್ನು ಹಿಡಿತಕ್ಕೆ ತೆಗೆದುಕೊಂಡ ಬಳಿಕ ತಾಲಿಬಾನ್ ಉಗ್ರರು ಹಲವೆಡೆ ಪ್ರಜೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ನಡುವೆ ತಾಲಿಬಾನ್ ಸಮಾಲೋಚನಾ ಸಮಿತಿ ರಚಿಸಿ, ತಾಲಿಬಾನ್ ನಾಯಕರನ್ನು ಒಳಗೊಂಡ ಉಸ್ತುವಾರಿ ಸರ್ಕಾರ ರಚಿಸಲಾಗುವುದು ಎಂದು ತಿಳಿಸಿರುವುದಾಗಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
ಹೊಸ ಸರ್ಕಾರದಲ್ಲಿ ನೂರಾರು ನಾಯಕರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದೆ ಎಂದು ತಾಲಿಬಾನ್ ಸದಸ್ಯನೊಬ್ಬ ತಿಳಿಸಿದ್ದಾನೆ. ಹೊಸ ಸರ್ಕಾರದಲ್ಲಿ ನ್ಯಾಯಾಂಗ, ಆಂತರಿಕ ಭದ್ರತೆ, ರಕ್ಷಣೆ, ವಿದೇಶಾಂಗ ವ್ಯವಹಾರಗಳು, ಹಣಕಾಸು, ಮಾಹಿತಿ ಮತ್ತು ಕಾಬೂಲ್ ವ್ಯವಹಾರಗಳಿಗೆ ವಿಶೇಷ ನಿಯೋಜನೆಗಾಗಿ ಸದಸ್ಯರ ನೇಮಕವಾಗಲಿದೆ ಎಂದು ತಾಲಿಬಾನ್ ಸದಸ್ಯ ತಿಳಿಸಿರುವುದಾಗಿ ವರದಿಯಾಗಿದೆ.
ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಅಫ್ಘನ್ ರಾಜಧಾನಿಯಲ್ಲಿದ್ದಾರೆ. ತಾಲಿಬಾನ್ ಸೇನಾ ಮುಖ್ಯಸ್ಥ ಮುಲ್ಲಾ ಮುಹಮ್ಮದ್ ಯಾಕೂಬ್ ಕಂದಹಾರ್‌ನಿಂದ ಕಾಬೂಲ್‌ಗೆ ಸರ್ಕಾರವನ್ನು ರಚಿಸುವ ಕುರಿತು ಆರಂಭಿಕ ಚರ್ಚೆ ನಡೆಸಿದ್ದಾರೆ ಎಂದು ತಾಲಿಬಾನಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕಾಬೂಲ್ ಏರ್ಪೋರ್ಟ್ನಲ್ಲಿ 24-36 ಗಂಟೆಯಲ್ಲಿ ಮತ್ತೊಂದು ಉಗ್ರ ದಾಳಿ: ಬೈಡನ್ ಎಚ್ಚರಿಕೆ