ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ ಆಡಳಿತಗಾರರು ಮಹಿಳಾ ಉದ್ಯೋಗಿಗಳನ್ನು ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದ್ದಾರೆ. ಪುರುಷರಿಗೆ ಮಾತ್ರ ಕಟ್ಟಡದೊಳಗೆ ಬರಲು ಅವಕಾಶ ನೀಡಲಾಗಿದೆ ಎಂದು ಸಚಿವಾಲಯದ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಚಿವಾಲಯದ ಬಳಿ ಮಹಿಳೆಯರು ಪ್ರತಿಭಟಿಸಲು ನಿರ್ಧರಿಸಿದ್ದಾರೆ. 20 ವರ್ಷಗಳ ನಂತರ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದೆ. ಧಾರ್ಮಿಕ ಮೂಲಭೂತವಾದಿಗಳ ಆಡಳಿತದಲ್ಲಿ ಮಹಿಳೆಯರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ.
ಸೆಪ್ಟೆಂಬರ್ 11, 2001ರ ಭಯೋತ್ಪಾದಕ ದಾಳಿಯ ನಂತರ ಅಮೆರಿಕ ನೇತೃತ್ವದ ಆಕ್ರಮಣಕ್ಕೂ ಮೊದಲು ತಾಲಿಬಾನ್ ಆಳ್ವಿಕೆಯಲ್ಲಿ ಅಂಗಚ್ಛೇದನ ಮತ್ತು ಸಾರ್ವಜನಿಕ ಮರಣದಂಡನೆಗಳನ್ನು ಕಂಡು ನರಕಯಾತನೆ ಅನುಭವಿಸಿರುವ ಹಿಂದಿನ ಪೀಳಿಗೆಗಳು ಇಂದಿಗೂ ಘಟನಾವಳಿಗಳನ್ನು ನೆನಪಿಸಿಕೊಳ್ಳುತ್ತಾರೆ.
ಕಳೆದ ತಿಂಗಳು ಕಾಬೂಲ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಇಸ್ಲಾಂ ಆಧಾರದ ಮೇಲೆ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಒದಗಿಸಲು ಬದ್ಧವಾಗಿದ್ದೇವೆ ಎಂದು ತಾಲಿಬಾನ್ ಆಡಳಿತಗಾರರು ಭರವಸೆ ನೀಡಿದ್ದರು. "ತಾಲಿಬಾನ್ ಮಹಿಳೆಯರಿಗೆ ಇಸ್ಲಾಂ ಕಾನೂನಿನ ಆಧಾರದ ಮೇಲೆ ತಮ್ಮ ಹಕ್ಕುಗಳನ್ನು ಒದಗಿಸಲು ಬದ್ಧ. ಮಹಿಳೆಯರು ಆರೋಗ್ಯ ಕ್ಷೇತ್ರದಲ್ಲಿ ಮತ್ತು ಅವರಿಗೆ ಅಗತ್ಯವಿರುವ ಇತರೆ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ಮಹಿಳೆಯರ ವಿರುದ್ಧ ಯಾವುದೇ ತಾರತಮ್ಯವಿಲ್ಲ" ಎಂದು ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದರು.
ಆದರೆ ಮುಂದಿನ ದಿನಗಳಲ್ಲಿ ಮಹಿಳೆಯರ ಹಕ್ಕುಗಳನ್ನು ಗೌರವಿಸುವ ಆಶ್ವಾಸನೆಗಳಿಂದ ಹಿಂದೆ ಸರಿದ ತಾಲಿಬಾನ್ ಸಹಶಿಕ್ಷಣಕ್ಕೆ ನಿಷೇಧ ಘೋಷಿಸಿತು. ಈ ತಿಂಗಳ ಆರಂಭದಲ್ಲಿ ನಡೆದ ಸರ್ಕಾರ ರಚನೆಯನ್ನೂ ಮಹಿಳೆಯರಿಗೆ ಯಾವುದೇ ಅವಕಾಶ ನೀಡಲಿಲ್ಲ.
ಇದನ್ನೂ ಓದಿ:ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ಉಗ್ರರ ದಾಳಿ: ಪಾಕ್‌ನ 7 ಯೋಧರು ಸಾವು