ಇಸ್ಲಾಮಾಬಾದ್: ಐಕ್ಯೂಏರ್ ಜಾಗತಿಕ ವಾಯು ಗುಣಮಟ್ಟದ ವರದಿ ಪ್ರಕಟಗೊಂಡಿದ್ದು, ಪಾಕಿಸ್ತಾನ ಜಗತ್ತಿನ ಎರಡನೇ ಅತಿ ಹೆಚ್ಚು ಕಲುಷಿತ ರಾಷ್ಟ್ರ ಎಂದು ತಿಳಿದು ಬಂದಿದೆ.
ಕಳೆದ ವರ್ಷ, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಶಿಫಾರಸು ಮಾಡಿದ ವಾಯು ಗುಣಮಟ್ಟದ ಮಟ್ಟಕ್ಕಿಂತ ಪಾಕಿಸ್ತಾನದಲ್ಲಿ ಪಿಎಂ 2.5 ಸಾಂದ್ರತೆಯು ಐದು ಪಟ್ಟು ಹೆಚ್ಚಾಗಿದೆ ಎಂದು ಸಮಾ ಟಿವಿ ವರದಿ ಮಾಡಿದೆ.
"ಪಾಕಿಸ್ತಾನದ ವಾತಾವರಣವು ಈ ಹಿಂದೆ ಸಹ ಬಹಳ ಕಳಪೆಯಾಗಿತ್ತು. ಪಾಕ್ನ ಅನೇಕ ಮೆಗಾಸಿಟಿಗಳು ಅಪಾರ ಪ್ರಮಾಣದ ಹೊಗೆ, ಮಬ್ಬು ಮತ್ತು ಮಾರಣಾಂತಿಕ ಹೊಗೆ ವಿಸರ್ಜಿಸುತ್ತಿದೆ " ಎಂದು ವಿಶ್ವ ವಾಯು ಗುಣಮಟ್ಟ ವರದಿ 2020 ಹೇಳಿದೆ.
ದೇಶದ ಅತ್ಯಂತ ಸ್ವಚ್ಛವಾದ ನಗರ ಎಂದರೆ 110ರ ಎಕ್ಯೂಐ ಹೊಂದಿರುವ ಇಸ್ಲಾಮಾಬಾದ್. ಅತ್ಯಂತ ಕಲುಷಿತ ನಗರ ಲಾಹೋರ್ ಎಂದು ಬಿಂಬಿಸಲಾಗಿದ್ದು, ವಿಶ್ವದಲ್ಲಿ 18ನೇ ಅತ್ಯಂತ ಕಲುಷಿತ ನಗರ ಎಂದೂ ಹೇಳಲಾಗಿದೆ.
ಪಾಕಿಸ್ತಾನದಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ಸಾವುಗಳು ವಾಯುಮಾಲಿನ್ಯದ ಋಣಾತ್ಮಕ ಪರಿಣಾಮಗಳಿಗೆ ಸಂಬಂಧಿಸಿವೆ ಎಂದು ಐಕ್ಯೂಏರ್ ಹೇಳಿದೆ. ತಜ್ಞರು ಹೇಳುವಂತೆ ದೇಶದಲ್ಲಿನ ಗಾಳಿಯು ಆಸ್ತಮಾ ಇರುವವರಿಗೆ ಮಾರಕವಾಗಬಹುದು ಎನ್ನುತ್ತಾರೆ.