ನವದೆಹಲಿ :ಇತ್ತೀಚೆಗೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡು 170 ಮಂದಿಯ ಸಾವಿಗೆ ಕಾರಣವಾಗಿದ್ದ ಆರೋಪಿಯನ್ನು ಐದು ವರ್ಷಗಳ ಹಿಂದೆ ದೆಹಲಿಯಲ್ಲಿ ಬಂಧಿಸಿ ಗಡಿ ಪಾರು ಮಾಡಲಾಗಿತ್ತು ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.
ಇಸ್ಲಾಮಿಕ್ ಸ್ಟೇಟ್ ಬ್ರಾಂಚ್ ಫಾರ್ ಇಂಡಿಯಾ (ವಿಲಾಯತ್ ಹಿಂದ್) (ISWH) ತನ್ನ ನಿಯತಕಾಲಿಕೆಯ 'ಸಾವತ್ ಅಲ್-ಹಿಂದ್' (ವಾಯ್ಸ್ ಆಫ್ ಹಿಂದ್)ನ ಇತ್ತೀಚಿನ ಸಂಚಿಕೆಯಲ್ಲಿ ಈ ಬಗ್ಗೆ ಬರೆದುಕೊಂಡಿದೆ.
ಕಾಬೂಲ್ ವಿಮಾನ ನಿಲ್ದಾಣದ ಆತ್ಮಹತ್ಯಾ ಬಾಂಬರ್ ಅಬ್ದುರ್ ರೆಹ್ಮಾನ್ ಅಲ್-ಲೋಗರಿ 5 ವರ್ಷಗಳ ಹಿಂದೆ ಕಾಶ್ಮೀರ ವಿಚಾರದ ಸೇಡಿಗಾಗಿ ದೊಡ್ಡ ವಿಧ್ವಂಸಕ ಕೃತ್ಯ ನಡೆಸಲು ದೆಹಲಿಗೆ ಹೋಗಿದ್ದ. ಆದರೆ, ಭಾರತೀಯ ಪೊಲೀಸರು ಆತನನ್ನು ಬಂಧಿಸಿ ಅಫ್ಘಾನಿಸ್ತಾನಕ್ಕೆ ಗಡಿಪಾರು ಮಾಡಿದ್ದರು ಎಂದು ಹೇಳಿದೆ.
ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ದೆಹಲಿಯ ಲಜಪತ್ ನಗರದ ಅಪಾರ್ಟ್ಮೆಂಟ್‌ವೊಂದರಲ್ಲಿ ಅಬ್ದುಲ್ ರೆಹ್ಮಾನ್ ಬಾಡಿಗೆಗೆ ಇದ್ದ. ಈತನ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದ್ದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW) ಈತನಿಗೆ ಫ್ಲಾಟ್ ಕೊಡಿಸಲು ನೆರವಾಗಿತ್ತು. ವಿಧ್ವಂಸಕ ಕೃತ್ಯಕ್ಕೆ ಸಂಚಿನ ಆರೋಪದಲ್ಲಿ 2017ರ ಸೆಪ್ಟೆಂಬರ್‌ನಲ್ಲಿ ಅಬ್ದುರ್ ರೆಹ್ಮಾನ್‌ನನ್ನು ಬಂಧಿಸಿ ಗಡಿಪಾರು ಮಾಡಲಾಗಿತ್ತು.
ಅಫ್ಘಾನಿಸ್ತಾನದ ಲೋಗರ್ ಪ್ರಾಂತ್ಯದ ಆತ್ಮಾಹುತಿ ಬಾಂಬರ್ ಅಬ್ದುರ್ ರೆಹ್ಮಾನ್ ಅಲ್-ಲೋಗರಿ 2021ರ ಆಗಸ್ಟ್ 16ರಂದು ಕಾಬೂಲ್‌ನ ಹಮೀದ್ ಕರ್ಜೈ ವಿಮಾನ ನಿಲ್ದಾಣದ ಅಬ್ಬೆ ಗೇಟ್ ಬಳಿ ತನ್ನನ್ನು ಸ್ಫೋಟಿಸಿಕೊಂಡಿದ್ದ. ಅಮೆರಿಕ ಸೇನೆ ವಿಮಾನ ನಿಲ್ದಾಣದ ಬಳಿ ಗುತ್ತಿಗೆದಾರರು ಹಾಗೂ ಅನುವಾದಕರ ದಾಖಲೆಗಳನ್ನು ಸಂಗ್ರಹಿಸುತ್ತಿದ್ದ ಐದು ಮೀಟರ್ ವ್ಯಾಪ್ತಿಯಲ್ಲೇ ಬಾಂಬ್ ಸ್ಫೋಟಿಸಿದ್ದ.
ಘಟನೆಯಲ್ಲಿ 13 ಮಂದಿ ಅಮೆರಿಕ ಸೈನಿಕರು,12ಕ್ಕೂ ಹೆಚ್ಚು ತಾಲಿಬಾನ್ ಹೋರಾಟಗಾರರು ಸೇರಿ 170 ಜನರ ಸಾವಿಗೆ ಕಾರಣವಾಗಿದೆ ಎಂದು ಭಯೋತ್ಪಾದಕ ಸಂಘಟನೆ ಐಎಸ್‌ಡಬ್ಯ್ಲೂಹೆಚ್ ನಿಯತಕಾಲಿಕೆ ಲೇಖನದಲ್ಲಿ ಆತ್ಮಹತ್ಯಾ ಬಾಂಬರ್ ಬಗ್ಗೆ ಬರೆದುಕೊಂಡಿದೆ.