ಕಾಬೂಲ್(ಅಫ್ಘಾನಿಸ್ತಾನ) :ದಕ್ಷಿಣ ಅಫ್ಘಾನಿಸ್ತಾನದ ಶಿಯಾ ಮಸೀದಿಯ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ. ಘಟನೆಯಲ್ಲಿ 47 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
ಕಂದಹಾರ್ ಪ್ರಾಂತ್ಯದ ಫಾತಿಮಿಯಾ ಮಸೀದಿಯ ಪ್ರವೇಶದ್ವಾರದ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈಯ್ಯಲಾಯಿತು. ಬಳಿಕ ಸಂಘಟನೆಯ ಇಬ್ಬರು ಒಳಗೆ ಮತ್ತು ಹೊರಗೆ ಸ್ಫೋಟಕಗಳನ್ನು ಸ್ಫೋಟಿಸಿದರು ಎಂದು ಐಎಸ್ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದೆ.
ಐಎಸ್‌ನ ಸುದ್ದಿ ಸಂಸ್ಥೆ ಅಮಾಕ್ ಹೇಳಿಕೆ ರಿಲೀಸ್ ಮಾಡಿದ್ದು, ಅನಾಸ್ ಅಲ್-ಖುರಸಾನಿ ಮತ್ತು ಅಬು ಅಲಿ ಅಲ್-ಬಲೂಚಿ ದಾಳಿಕೋರರಾಗಿದ್ದಾರೆ ಎಂದು ತಿಳಿಸಿದೆ. ಐಎಸ್, ತಾಲಿಬಾನ್ ಮತ್ತು ಅಫ್ಘನ್ ಮೇಲೆ ತನ್ನ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂಬ ಆತಂಕ ಹುಟ್ಟು ಹಾಕಿದೆ. ನಿನ್ನೆ ನಡೆದ ದಾಳಿಯು ಭೀಕರವಾಗಿದೆ.
ಅಫ್ಘನ್ನಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ನಂತರ ಕಾಬೂಲ್ ಮೇಲೆ ತಾಲಿಬಾನ್ ಹಿಡಿತ ಸಾಧಿಸಿತು. ಐಎಸ್ ತನ್ನ ಹಿಂದಿನ ಭದ್ರಕೋಟೆಯಲ್ಲಿ ದಾಳಿ ನಡೆಸುತ್ತಿದೆ. ಆದರೆ, ಇತ್ತೀಚೆಗೆ ಐಎಸ್, ಉತ್ತರ ಮತ್ತು ಕಾಬೂಲ್ ಮೇಲೆಯೂ ತನ್ನ ದಾಳಿ ನಡೆಸುತ್ತಿದೆ.
ದಶಕಗಳ ಯುದ್ಧದ ನಂತರ ಶಾಂತಿ ಮತ್ತು ಭದ್ರತೆ ಪುನಃ ಸ್ಥಾಪಿಸಲು ತಾಲಿಬಾನ್ ಪಣ ತೊಟ್ಟಿದೆ. ಅಲ್ಲದೆ, ಇತರೆ ದೇಶಗಳ ಮೇಲೆ ಉಗ್ರ ದಾಳಿಯನ್ನು ನಡೆಸಲು ಈ ನೆಲವನ್ನು ಬಳಸಲು ಅನುಮತಿಸಲ್ಲ ಎಂದು ಅಮೆರಿಕ ಭರವಸೆ ನೀಡಿದೆ.