ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಲ್ಲಿ ಕ್ಷಣಕ್ಷಣಕ್ಕೂ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಆದಷ್ಟು ಬೇಗ ದೇಶವನ್ನು ತೊರೆಯಲು ಹರಸಾಹಸ ಪಡುತ್ತಿದ್ದಾರೆ. ಅವರಿಗೆ ಅಲ್ಲಿಂದ ತಪ್ಪಿಸಿಕೊಂಡು ಹೊರಬರುವ ಇರುವ ಏಕೈಕ ಮಾರ್ಗವೆಂದರೆ ಅದು ಕಾಬೂಲ್ ವಿಮಾನ ನಿಲ್ದಾಣ. ಆದರೆ ಏರ್ಪೋರ್ಟ್ನಲ್ಲಿ ಆಹಾರ ಪದಾರ್ಥಗಳ ಬೆಲೆ ನೋಡಿದ್ರೆ ಗಗನಕ್ಕೇರಿದೆ.
ಮನೆ-ಮಠಗಳನ್ನು ತೊರೆದು, ಅದರಲ್ಲಿಯೂ ಕೆಲವರಂತೆ ಪ್ರಾಣ ಉಳಿದರೆ ಸಾಕೆಂದು ಖಾಲಿ ಕೈಯ್ಯಲ್ಲಿ, ಉಟ್ಟ ಬಟ್ಟೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದ್ರೆ ಅಲ್ಲಿ ಇಂದು ನೀರಿನ ಬಾಟಲ್ ಖರೀದಿಸಬೇಕೆಂದರೆ 40 ಡಾಲರ್ ಅಂದ್ರೆ 3,000 ರೂ. ಹಣ ನೀಡಬೇಕಿದೆ. ಒಂದೇ ಒಂದು ತಟ್ಟೆ ಅನ್ನಕ್ಕೆ 7,500 ರೂ. ಖರ್ಚು ಮಾಡಬೇಕಿದೆ. ಇದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಷ್ಟೇ ಅಲ್ಲ, ಅಫ್ಘನ್ ಕರೆನ್ಸಿಯನ್ನೂ ಪಡೆಯುತ್ತಿಲ್ಲ. ಅಮೆರಿಕನ್ ಡಾಲರ್‌ಗಳಲ್ಲೇ ಜನರು ಹಣ ಕಟ್ಟಬೇಕಾಗಿದೆ.