ತಾಲಿಬಾನ್ ನಿಯಂತ್ರಣಕ್ಕೆ ಬಂದ ನಂತರ ಅಫ್ಘಾನಿಸ್ತಾನದ ರಾಜಧಾನಿಯಿಂದ ಹಲವಾರು ಭಯಾನಕ ದೃಶ್ಯಗಳು ಹೊರಹೊಮ್ಮುತ್ತಿವೆ. ನೂರಾರು ಜನರು ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದೇ ವಿಮಾನವನ್ನು ನೂರಾರು ಜನರು ಸುತ್ತುವರಿದ ವಿಡಿಯೋ ವೈರಲ್ ಆಗಿತ್ತು. ಹೀಗೆ ತಮ್ಮ ಜನರು ಅಫ್ಘಾನಿಸ್ತಾನದಿಂದ ಹೊರ ನಡೆಯಲು ಪ್ರಯತ್ನಿಸುತ್ತಿರುವಾಗ ಕಾಲ್ತುಳಿತ ಉಂಟಾಗಿ, ಹಲವರು ಗಾಯಗೊಂಡ ಪ್ರಸಂಗಗಳು ನಡೆದಿವೆ.
ಆಕಾಶದಿಂದ ಇಬ್ಬರು ವ್ಯಕ್ತಿಗಳು ಬೀಳುವ ದೃಶ್ಯ ಭಯಾನಕದ ಜತೆಗೆ ಎದೆ ಒಡೆಯುವಂತೆ ಮಾಡಿದೆ. ಹೀಗೆ ಜೀವಕಳೆದುಕೊಂಡವರು, ವಿಮಾನದ ಒಳಗಡೆ ಇರುವ ಬದಲು ಅದರ ಹೊರಗಡೆಯ ಒಂದು ಚಕ್ರದ ಮೇಲೆ ಕುಳಿತಿದ್ದರು ಎನ್ನಲಾಗ್ತಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಜಂಗುಳಿಯಿಂದಾಗಿ ಇಂದು ಕೂಡ ಮತ್ತೊಂದು ಕರುಳು ಹಿಂಡುವ ದೃಶ್ಯ ಹೊರಬಿದ್ದಿದೆ.
ಇದೀಗ ಕಾಬೂಲ್ ವಿಮಾನ ನಿಲ್ದಾಣದಲ್ಲಿ ತಾಯಿಯಿಲ್ಲದೇ ತಬ್ಬಲಿಯಾದ ಏಳು ತಿಂಗಳ ಮಗುವೊಂದು ಅಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಮನಕಲಕುವ ಫೋಟೋವನ್ನು ರೀಗಾನ್ ಬೆಟಾಲಿಯನ್ (Reagon Battalion) ಹಂಚಿಕೊಂಡಿದೆ. "ಕಾಬೂಲ್ ವಿಮಾನ ನಿಲ್ದಾಣದಲ್ಲಿ ತಾಯಿಯಿಲ್ಲದೇ ತಬ್ಬಲಿಯಾದ ಮಗುವೊಂದು ಅಳುತ್ತಿದೆ" ಎಂದು ಬರೆದುಕೊಂಡಿದೆ.