ನಾಯ್ಪಿಟಾವ್ : ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಬಳಿಕ ಬಹುರಾಷ್ಟ್ರೀಯ ಮೂಲಸೌಕರ್ಯ ಕಾರ್ಯಕ್ರಮವಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್ಐ) ನ್ನು ತಿರಸ್ಕರಿಸಿದ ಭಾರತಕ್ಕೆ ಪಾಠ ಕಲಿಸುವುದೇ ಚೀನಾದ ಉದ್ದೇಶವಾಗಿತ್ತು. ಇದನ್ನು ಬಿಟ್ಟರೆ ಚೀನಾಕ್ಕೆ ವಾಸ್ತವ ಗಡಿ ರೇಖೆಯಲ್ಲಿ ವಿವಾದ ಎಬ್ಬಿಸುವ ಇಚ್ಚೆ ಇರಲಿಲ್ಲ ಎಂದು ಸ್ವೀಡಿಷ್ನ ಹಿರಿಯ ಪತ್ರಕರ್ತ ಬರ್ಟಿಲ್ ಲಿಂಟ್ನರ್ ತಿಳಿಸಿದ್ದಾರೆ.
ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಚೀನಾ ಕೊರೊನಾ ಪರಿಸ್ಥಿತಿಯ ಲಾಭ ಪಡೆಯುತ್ತಿದೆ. ಹೊಸ ಭದ್ರತಾ ಕಾನೂನಿನೊಂದಿಗೆ ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ತನ್ನ ಸಾಮರ್ಥ್ಯವನ್ನು ಬಲಪಡಿಸಲು ಯೋಚಿಸುತ್ತಿದೆ. ಇದರ ಭಾಗವಾಗಿ, ಚೀನಾದ ಫೈಟರ್ ಜೆಟ್‌ಗಳು ತೈವಾನ್‌ನ ವಾಯುಪ್ರದೇಶಕ್ಕೆ ಪ್ರವೇಶಿಸಿದೆ. ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಂನ ರಮ್ಮಿಂಗ್, ಫಿಲಿಪೈನ್ ಮೀನುಗಾರಿಕೆ ದೋಣಿಗಳು, ಮಲೇಷ್ಯಾದ ತೈಲ ಪರಿಶೋಧನಾ ಹಡಗುಗಳನ್ನು ಒಂದು ತಿಂಗಳ ಕಾಲ ತಡೆ ಹಿಡಿದಿದೆ. ಜೊತೆಗೆ ಎಲ್ಎಸಿಯಲ್ಲಿ ಭಾರತೀಯ ಸೈನ್ಯದೊಂದಿಗೆ ವಿವಾದ ಮಾಡಿಕೊಂಡಿದೆ ಎಂದು ಬರ್ಟಿಲ್ ಲಿಂಟ್ನರ್ ವಿಶ್ಲೇಷಿಸಿದ್ದಾರೆ.