ಅತ್ಯಂತ ಸುಲಭವಾಗಿ ತಾಲಿಬಾನಿಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಭಾನುವಾರ ವಶಕ್ಕೆ ಪಡೆದಿದ್ದು, ಈ ಮೂಲಕ ಅಫ್ಘಾನ್ ಆಡಳಿತ ಉಗ್ರರ ಪಾಲಾಗಿದೆ. ಆದರೆ, ದೇಶದ ಆಡಳಿತ ಉಗ್ರರಿಗೆ ಸಿಗಲು ಅಧ್ಯಕ್ಷ ಅಶ್ರಫ್ ಘನಿಯ ಪಲಾಯನ ಪ್ರಮುಖ ಕಾರಣವಾಗಿದೆ. ಅಧ್ಯಕ್ಷರು ಪಲಾಯನ ಮಾಡುತ್ತಿದ್ದಂತೆ ಸರ್ಕಾರ ಪತನಗೊಂಡಿದೆ. ದೇಶದ ಸಾವಿರಾರು ಜನರು ಜೀವಭಯದಿಂದ ಎಲ್ಲಾದರು ಹೋಗಿ ಬದುಕು ಕಟ್ಟಿಕೊಳ್ಳುವ ಹಾದಿ ಹಿಡಿದಿದ್ದಾರೆ.
ಪೊಲೀಸ್ ಠಾಣೆಗಳು ವಶ, ಮನೆ ಮನೆಗೆ ನುಗ್ಗಿ ಲೂಟಿ
ಅಫ್ಘಾನ್ ರಾಜಧಾನಿ ಕಾಬೂಲ್‌ನಾದ್ಯಂತ ನಿಯೋಜನೆಗೊಂಡಿರುವ ತಾಲಿಬಾನ್ ಉಗ್ರರು, ಪೊಲೀಸ್ ಸಿಬ್ಬಂದಿ ಬಿಟ್ಟು ಪಲಾಯನ ಮಾಡಿರುವ ಠಾಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಹಲವು ನಗರ, ಜಿಲ್ಲೆಗಳಲ್ಲಿ ಮೆರವಣಿಗೆ ಮಾಡುತ್ತಾ ಅಮಾಯಕ ಜನರ ಮನೆಗಳಿಗೆ ನುಗ್ಗಿ ಲೂಟಿ ಮಾಡುತ್ತಿದ್ದಾರೆ. ಜನರು ತಮ್ಮ ಮನೆಗಳಿಗೆ ಬೀಗ ಹಾಕಿ ಒಳಗೆ ಕೂರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅಧಿಕಾರ ಹಸ್ತಾಂತರಿಸಿ ಪಲಾಯನಗೈದ ಅಧ್ಯಕ್ಷ
ಅಫ್ಘಾನಿಸ್ತಾನ ಸರ್ಕಾರ ಮತ್ತು ತಾಲಿಬಾನ್ ಸಂಧಾನಕಾರರ ನಡುವಿನ ಮಾತುಕತೆಯ ನಂತರ ತಾಲಿಬಾನ್ ಮಧ್ಯಂತರ ಸರ್ಕಾರ ರಚಿಸಿದ್ದರಿಂದ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ತಾಲಿಬಾನ್ಗಳಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ತಾಲಿಬಾನಿಗಳು ಅಲಿ ಅಹ್ಮದ್ ಜಲಾಲಿಯನ್ನು ಅವರ ಹೊಸ ಮಧ್ಯಂತರ ಸರ್ಕಾರದ ಮುಖ್ಯಸ್ಥನಾಗಿ ನೇಮಿಸುವ ಸಾಧ್ಯತೆಯಿದೆ. ಜಲಾಲಿ ಜನವರಿ 2003 ರಿಂದ ಸೆಪ್ಟೆಂಬರ್ 2005 ರವರೆಗೆ ದೇಶದ ಆಂತರಿಕ ಸಚಿವನಾಗಿದ್ದ ಎಂದು ತಿಳಿದು ಬಂದಿದೆ.
ದೇಶದ ಜನತೆಗೆ ಅಭಿನಂದನೆ ಹೇಳಿದ ಉಗ್ರರು
ಸರ್ಕಾರದೊಂದಿಗೆ ಮಾತುಕತೆ ನಡೆಸಿದ ತಾಲಿಬಾನ್‌ನ ಪ್ರಮುಖ ಸಂಧಾನಕಾರ ಮುಲ್ಲಾ ಅಬ್ದುಲ್ ಘನಿ ಬರದಾರ್, ಅಫ್ಘಾನಿಸ್ತಾನದ ವಿಜಯಕ್ಕಾಗಿ ದೇಶದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾನೆ. ಬರದಾರ್, ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಶಾಂತಿ ನೆಲೆಸುತ್ತದೆ ಮತ್ತು ದೇಶವಾಸಿಗಳಿಗೆ ಉತ್ತಮ ಭವಿಷ್ಯ ಕಾದಿದೆ ಎಂದು ಭರವಸೆ ನೀಡಿದ್ದಾನೆ.
ವಿಮಾನಯಾನ ಸೇವೆ ಬಂದ್, ನರಕವಾದ ಏರ್ಪೋರ್ಟ್
ಇಬ್ಬರು ಹಿರಿಯ ಯುಎಸ್ ಅಧಿಕಾರಿಗಳ ಪ್ರಕಾರ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ವಾಣಿಜ್ಯ ವಿಮಾನ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿದೆ. ಸೇನಾ ವಿಮಾನಗಳಲ್ಲಿ ಜನರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರೆದಿದೆ. ಕಾಬೂಲ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯು ತನ್ನ ವೆಬ್‌ಸೈಟ್‌ನಲ್ಲಿ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ವಿಮಾನ ನಿಲ್ದಾಣಕ್ಕೆ ಬೆಂಕಿ ಹೊತ್ತಿಕೊಳ್ಳಲಿದ್ದು ಯುಎಸ್ ನಾಗರಿಕರಿಗೆ ರಕ್ಷಣೆ ನೀಡುವಂತೆ ಕೋರಿದೆ.