ನವದೆಹಲಿ: ತಾಲಿಬಾನ್ ನಂತರದ ಅಮೆರಿಕದ ಸೈನ್ಯ ಹಿಂತೆಗೆತ ಬಳಿಕ ಹೆಚ್ಚುತ್ತಿರುವ ಮಿಲಿಟರಿ ಆಕ್ರಮಣದ ಹಿನ್ನೆಲೆಯಲ್ಲಿ ಅಫ್ಘಾನ್ ಸೇನಾ ಮುಖ್ಯಸ್ಥ ಜನರಲ್ ವಾಲಿ ಮೊಹಮ್ಮದ್ ಅಹ್ಮದ್‌ಜೈ ಅವರು ಈ ವಾರದ ಭಾರತ ಭೇಟಿಯನ್ನು ಮುಂದೂಡಿದ್ದಾರೆ.
ಯುದ್ಧದ ತೀವ್ರತೆ ಹಾಗೂ ತಾಲಿಬಾನ್‌ನಿಂದ ಹೆಚ್ಚಿದ ದಾಳಿ, ಆಕ್ರಮಣದಿಂದಾಗಿ ಅಲ್ಲಿನ ಸೇನಾ ಮುಖ್ಯಸ್ಥರು ಭಾರತಕ್ಕೆ ಭೇಟಿ ನೀಡುವುದನ್ನು ಮುಂದೂಡಲಾಗಿದೆ ಎಂದು ನವದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ಜನರಲ್ ಅಹ್ಮದ್‌ಜೈ ಜುಲೈ 27 ರಿಂದ ಮೂರು ದಿನ ಭಾರತ ಪ್ರವಾಸ ಕೈಗೊಂಡು, ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಾನೆ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಬೇಕಿತ್ತು. ಇದೇ ವೇಳೆ ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರನ್ನು ಭೇಟಿ ಮಾಡುವ ಕಾರ್ಯಕ್ರಮ ಇತ್ತು. ಬ್ಲಿಂಕೆನ್ ನಾಳೆ ದೆಹಲಿಗೆ ಆಗಮಿಸುತ್ತಿದ್ದಾರೆ.