ಅಬ್ಬೊಟ್ಟಾಬಾದ್(ಪಾಕಿಸ್ತಾನ):ಸಾಮಾನ್ಯವಾಗಿ ಗರ್ಭಿಣಿಯರು ಒಂದು, ಎರಡು ಅಥವಾ ಮೂವರು ಮಕ್ಕಳಿಗೆ ಜನ್ಮ ನೀಡುವುದನ್ನು ಕೇಳಿದ್ದೇವೆ. ಆದರೆ, ಇಲ್ಲೋರ್ವ ಮಹಿಳೆ ಒಂದೇ ಹೆರಿಗೆಯಲ್ಲಿ ದಾಖಲೆಯ ಏಳು ಶಿಶುಗಳಿಗೆ ಜನ್ಮ ನೀಡಿದ್ದಾರೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಬ್ಬೊಟಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಈ ಪವಾಡ ನಡೆದಿದೆ. ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವೈದ್ಯರು, ಮಹಿಳೆಗೆ ಅಲ್ಟ್ರಾಸೌಂಡ್ ಮಾಡಿಸಿದ ಸಂದರ್ಭದಲ್ಲಿ ಗರ್ಭದಲ್ಲಿ ಐದು ಶಿಶುಗಳಿರುವುದು ಗೊತ್ತಾಗಿತ್ತು. ಆದರೆ, ಹೆರಿಗೆ ಸಂದರ್ಭದಲ್ಲಿ ಏಳು ಮಕ್ಕಳಿಗೆ ಜನ್ಮ ನೀಡಿದ್ದಾಗಿ ತಿಳಿಸಿದ್ದಾರೆ. ಎಲ್ಲ ಶಿಶುಗಳು ಹಾಗೂ ಮಹಿಳೆ ಆರೋಗ್ಯವಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ:ಚಲಿಸುತ್ತಿದ್ದ ರೈಲಿನಿಂದ ಬಿದ್ದ ಗರ್ಭಿಣಿ ರಕ್ಷಿಸಿದ ಆರ್ಪಿಎಫ್ ಸಿಬ್ಬಂದಿ.. ವಿಡಿಯೋ
ಯಾರ್ ಮೊಹಮ್ಮದ್ ಪತ್ನಿಯನ್ನ ಹೆರಿಗೆ ನೋವಿನ ಕಾರಣ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ, ಏಳು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದರ ಬಗ್ಗೆ ಮಾತನಾಡಿರುವ ಯಾರ್ ಮೊಹಮ್ಮದ್, ಇಷ್ಟೊಂದು ಮಕ್ಕಳನ್ನ ಸಾಕಲು ತನಗೆ ಯಾವುದೇ ರೀತಿಯ ತೊಂದರೆ ಇಲ್ಲವಂತೆ.
ತಮ್ಮದು ಅವಿಭಕ್ತ ಕುಟುಂಬ(joint Family) ಆಗಿರುವ ಕಾರಣ ಎಲ್ಲರೂ ಮಕ್ಕಳ ಆರೈಕೆ ಮಾಡಲಿದ್ದಾರೆ ಎಂದಿದ್ದಾರೆ. ಈಗಾಗಲೇ ಮೊಹಮ್ಮದ್ಗೆ ಎರಡು ಹೆಣ್ಣು ಮಕ್ಕಳಿದ್ದು, ಇದೀಗ ಏಳು ಮಕ್ಕಳ ಜನನವಾಗಿರುವ ಕಾರಣ ಒಟ್ಟು 9 ಮಕ್ಕಳ ತಂದೆಯಾಗಿದ್ದಾರೆ.
8 ತಿಂಗಳ ಗರ್ಭಿಣಿಯಾಗಿದ್ದ ವೇಳೆ ಆಸ್ಪತ್ರೆಗೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಆಗಮಿಸಿದ್ದ ವೇಳೆ ಗರ್ಭದಲ್ಲಿ 5 ಮಕ್ಕಳು ಇರುವುದು ಕನ್ಫರ್ಮ್ ಆಗಿತ್ತು. ಈ ವೇಳೆ, ಅವರ ರಕ್ತದೊತ್ತಡ ಕೂಡ ತುಂಬಾ ಜೋರಾಗಿತ್ತು. ಇದೀಗ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿಸಿ ಎಲ್ಲ ಮಕ್ಕಳಿಗೂ ಹೆರಿಗೆ ಮಾಡಿಸಲಾಗಿದೆ ಎಂದಿದ್ದಾರೆ. ಹೆಚ್ಚಿನ ನಿಗಾ ಇಡುವ ಸಲುವಾಗಿ ಮಹಿಳೆ ಹಾಗೂ ಓರ್ವ ಶಿಶುವನ್ನ ಐಸಿಯುನಲ್ಲಿ ಶಿಫ್ಟ್ ಮಾಡಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.