ಕರಾಚಿ, ಪಾಕಿಸ್ತಾನ:ಟ್ರಕ್ ಮೇಲೆ ಗ್ರೆನೇಡ್ ದಾಳಿ ನಡೆದು ನಾಲ್ಕು ಮಕ್ಕಳು ಸೇರಿದಂತೆ ಸುಮಾರು 10 ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದ್ದು, ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕರಾಚಿಯ ಬಲ್ಡಿಯಾ ನಗರದ ಮಾವಾಚ್ ಗೋತ್ ಪ್ರದೇಶದ ಬಳಿ ಟ್ರಕ್ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿದ್ದು, ಪ್ರಾಥಮಿಕ ತನಿಖೆಯ ಮೂಲಕ ಇದೊಂದು ಗ್ರೆನೇಡ್ ದಾಳಿ ಎಂದು ಗೊತ್ತಾಗಿದೆ ಎಂದು ಭಯೋತ್ಪಾದನೆ ನಿಗ್ರಹ ಇಲಾಖೆಯ (ಸಿಟಿಡಿ) ಹಿರಿಯ ಅಧಿಕಾರಿ ರಾಜಾ ಉಮರ್ ಖಟ್ಟಾಬ್ ಸ್ಪಷ್ಟನೆ ನೀಡಿದ್ದಾರೆ.
ದಾಳಿಕೋರರು ಮೋಟಾರ್ ಸೈಕಲ್ ಮೇಲೆ ಬಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ರಾಜಾ ಉಮರ್ ಖಟ್ಟಾಬ್ ಮಾಹಿತಿ ನೀಡಿದ್ದಾರೆ ಎಂದು ದಿ ಡಾನ್ ವರದಿ ಮಾಡಿದೆ.
ಮೃತದೇಹಗಳನ್ನು ಡಾ.ರುತ್ ಪ್ಫೌ ಸಿವಿಲ್ ಆಸ್ಪತ್ರೆಗೆ ತರಲಾಗಿದೆ. ಗ್ರೆನೇಡ್ ದಾಳಿಯಲ್ಲಿ ಆರು ಮಹಿಳೆಯರು ಮತ್ತು ನಾಲ್ಕು ಮಕ್ಕಳು ಸೇರಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇತರ 10 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಸರ್ಜನ್ ಡಾ.ಖ್ಯಾರರ್ ಅಬ್ಬಾಸಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:75th Independence Day : ವಾಘಾ-ಅತ್ತಾರಿ ಬಾರ್ಡರ್ನಲ್ಲಿ ಬೀಟಿಂಗ್ ದಿ ರಿಟ್ರೀಟ್