ವಾಷಿಂಗ್ಟನ್ (ಅಮೆರಿಕ):ಈ ಬಾರಿಯ ಚುನಾವಣೆಯಲ್ಲಿ ತಾವು ಆಯ್ಕೆಯಾದರೆ ಭಾರತ ಪರ ನಿಲ್ಲುವುದಾಗಿ ಹಾಗೂ ಭಾರತ ಮತ್ತು ಅಮೆರಿಕದ ಸಂಬಂಧವನ್ನು ಇನ್ನಷ್ಟು ನಲಪಡಿಸಲಾಗುತ್ತದೆ ಎಂದು ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಸ್ಪಷ್ಟಪಡಿಸಿದ್ದಾರೆ.
ಇದೇ ವರ್ಷ ನವೆಂಬರ್ 3ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಈ ಬಾರಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಎದುರಾಳಿಯಾಗಿರುವ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಅಮೆರಿಕದಲ್ಲಿನ ಅನಿವಾಸಿ ಭಾರತೀಯ ಮತಗಳನ್ನು ಸೆಳೆಯಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ತಮ್ಮದೇ ಪಕ್ಷದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿರುವುದು ಜೋ ಬಿಡೆನ್ ಅವರಿಗೆ ವರವಾಗಲಿದ್ದು, ಅದರ ಜೊತೆಗೆ ಭಾರತದೊಂದಿಗೆ ಬಾಂಧವ್ಯವನ್ನು ಹೆಚ್ಚಿಸುವ ಮಾತುಗಳನ್ನಾಡಿದ್ದಾರೆ.
15 ವರ್ಷಗಳ ಹಿಂದೆ ಭಾರತದೊಂದಿಗಿನ ನಾಗರಿಕ ಅಣ್ವಸ್ತ್ರದ ಬಗೆಗಿನ ಐತಿಹಾಸಿಕ ಒಪ್ಪಂದಕ್ಕೆ ನಾನು ಒಪ್ಪಿಗೆ ನೀಡಿದ್ದೆ. ಭಾರತ ಹಾಗೂ ಅಮೆರಿಕ ಒಗ್ಗಟ್ಟಾಗಿದ್ದರೆ ಜಗತ್ತು ಸುರಕ್ಷಿತವಾಗಿರುತ್ತದೆ ಎಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ವೇಳೆ ಇಂಡೋ-ಅಮೆರಿಕನ್ ನಾಗರಿಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಬಿಡೆನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.