ವಾಷಿಂಗ್ಟನ್: ಪಾಕಿಸ್ತಾನ ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸದಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ಲದೆ, ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವ ತುರ್ತು ಅವಶ್ಯಕತೆ ಇದೆ ಎಂದು ಭಾರತ ಮತ್ತು ಅಮೆರಿಕಾ ಹೇಳಿವೆ.
26/11 ಮುಂಬೈ ದಾಳಿ ಮತ್ತು ಪಠಾಣ್‌ಕೋಟ್ ವಾಯುನೆಲೆಯ ದಾಳಿ ಸೇರಿದಂತೆ ಭಯೋತ್ಪಾದಕ ದಾಳಿಯ ವಿಚಾರದಲ್ಲಿ ಪಾಕ್ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ.
ಸೆಪ್ಟೆಂಬರ್ 9 ಮತ್ತು 10ರಂದು ನಡೆದ ಭಾರತ-ಅಮೆರಿಕಾ ಭಯೋತ್ಪಾದನಾ ವಿರೋಧಿ ಸಮಾವೇಶದಲ್ಲಿ ಉಭಯ ದೇಶಗಳು ಜಂಟಿ ಹೇಳಿಕೆ ನೀಡಿವೆ.
ಭಾರತೀಯ ನಿಯೋಗದ ನೇತೃತ್ವವನ್ನು ಮಹಾವೀರ್ ಸಿಂಗ್ವಿ ವಹಿಸಿದ್ದರೆ, ಅಮೆರಿಕಾದಿಂದ ಭಯೋತ್ಪಾದನಾ ನಿಗ್ರಹದ ರಾಜ್ಯ ಇಲಾಖೆಯ ಸಂಯೋಜಕರಾದ ನಾಥನ್ ಸೇಲ್ಸ್ ನೇತೃತ್ವ ವಹಿಸಿದ್ದರು. ಈ ಸಭೆಯಲ್ಲಿ ಭಯೋತ್ಪಾದನಾ ನಿಗ್ರಹದ ಕುರಿತಾಗಿ ಉಭಯ ದೇಶಗಳು ತಮ್ಮ ನಡುವೆ ಇರುವ ಸಮಗ್ರ ಜಾಗತಿಕ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಿದವು.
ಭಯೋತ್ಪಾದಕ ಸಂಘಟನೆಗಳ ಕಾರ್ಯಾಚರಣೆಗಳನ್ನು ಎದುರಿಸುವುದು, ಅಂತರ್ಜಾಲದ ಭಯೋತ್ಪಾದಕ ಬಳಕೆಯನ್ನು ಎದುರಿಸುವುದು, ಭಯೋತ್ಪಾದಕರ ಗಡಿಯಾಚೆಗಿನ ಚಲನೆ ಮತ್ತು ವಿಚಾರಣೆ, ಭಯೋತ್ಪಾದನಾ ನಿಗ್ರಹ ಸವಾಲುಗಳನ್ನು ಎದುರಿಸುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿದೆ.
ಭಾರತ-ಯುಎಸ್ ಪರಸ್ಪರ ಕಾನೂನು ಮತ್ತು ಹಸ್ತಾಂತರದ ನೆರವು, ದ್ವಿಪಕ್ಷೀಯ ಕಾನೂನು ಜಾರಿ ತರಬೇತಿ ಮತ್ತು ಸಹಕಾರದ ಬಗ್ಗೆಯೂ ಚರ್ಚಿಸಿವೆ.