ಬೋಸ್ಟನ್:ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಂತಹ ಸಂಸ್ಥೆಗಳು ತುರ್ತಾಗಿ ಸುಧಾರಣೆಯಾಗಬೇಕು. ಏಕೆಂದರೆ ಅವರು ದಶಕಗಳವರೆಗೆ ಗಮನಿಸದೇ ಇರುವ ದೇಶಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಎಲ್ಲಾ ಸಂಸ್ಥೆಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳುವುದನ್ನು ನೋಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊಸಾವರ್-ರಹ್ಮಾನಿ ಸೆಂಟರ್ ಫಾರ್ ಬ್ಯುಸಿನೆಸ್ ಅಂಡ್ ಗವರ್ನಮೆಂಟ್ ಆಯೋಜಿಸಿದ್ದ ಭಾಷಣದಲ್ಲಿ ಹಾರ್ವರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಲಾರೆನ್ಸ್ ಸಮ್ಮರ್ಸ್ ಜೊತೆ ಸಂವಾದದಲ್ಲಿ ಪಾಲ್ಗೊಂಡ ವಿತ್ತ ಸಚಿವೆ ಸೀತಾರಾಮನ್ ಈ ಮಹತ್ವದ ಹೇಳಿಕೆ ನೀಡಿದ್ದಾರೆ.
ಹಿಂದುಳಿದ ರಾಷ್ಟ್ರಗಳ ಬಗ್ಗೆ ವಿಶ್ವಸಂಸ್ಥೆ ಗಮನಹರಿಸಬೇಕಿದೆ
ವ್ಯಾಪಾರ, ಭದ್ರತೆ, ವಿತ್ತೀಯ ಚೌಕಟ್ಟು ಮತ್ತು ಧನಸಹಾಯ ಅಭಿವೃದ್ಧಿಯ ವಿಷಯವಾಗಿ ದಶಕಗಳವರೆಗೆ ಗಮನಿಸದೇ ಉಳಿದಿರುವ ದೇಶಗಳ ಬಗ್ಗೆ ಅವರಲ್ಲಿ ಹೆಚ್ಚಿನವರು ಈಗ ಮಾತನಾಡುವುದಿಲ್ಲ ಎಂದು ಹೇಳಿದರು. ಈ ಎಲ್ಲ ಸಂಸ್ಥೆಗಳು ಹೆಚ್ಚು ಪಾರದರ್ಶಕವಾಗಿರಬೇಕು. ಸಾಕಷ್ಟು ಪ್ರಾತಿನಿಧ್ಯವನ್ನು ಪಡೆಯದ ದೇಶಗಳನ್ನು ಪ್ರತಿನಿಧಿಸಬೇಕು ಮತ್ತು ಆ ಬಗ್ಗೆ ಮಾತನಾಡಬೇಕಾದ ಅವಶ್ಯಕತೆಯಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.