ಚಿಯಾಪಾಸ್(ಮೆಕ್ಸಿಕೋ):ವಲಸಿಗರನ್ನು ಹೊತ್ತು ಸಾಗುತ್ತಿದ್ದ ಸರಕು ಸಾಗಣೆ ಟ್ರಕ್ ಉರುಳಿ, ಪಾದಚಾರಿ ಸೇತುವೆಗೆ ಡಿಕ್ಕಿಯಾಗಿ ಸುಮಾರು 49 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಮೆಕ್ಸಿಕೋದಲ್ಲಿ ನಡೆದಿದೆ.
ಟ್ರಕ್ನಲ್ಲಿದ್ದವರು ಮಧ್ಯ ಅಮೇರಿಕನ್ ವಲಸಿಗರು ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಅಲ್ಲಿನ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಚಿಯಾಪಾಸ್ ರಾಜ್ಯದ ಸಿವಿಲ್ ಡಿಫೆನ್ಸ್ ಕಛೇರಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಮೊರೆನೊ ಮಾಧ್ಯಮಗಳಿಗೆ ತಿಳಿಸಿದರು.
ಚಿಯಾಪಾಸ್ ರಾಜ್ಯದ ರಾಜಧಾನಿ ಟಕ್ಸ್ಟ್ಲಾ ಗುಟಿರೆಜ್ ಕಡೆಗೆ ತೆರಳುವ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ನತದೃಷ್ಟ ವಾಹನದಲ್ಲಿದ್ದವರು ಮಧ್ಯ ಅಮೆರಿಕದ ವಲಸಿಗರು ಎಂದು ಹೇಳಲಾಗುತ್ತಿದೆ. ಆದರೆ ಅವರ ರಾಷ್ಟ್ರೀಯತೆಯನ್ನು ಅಲ್ಲಿನ ಸರ್ಕಾರ ದೃಢಪಡಿಸಿಲ್ಲ. ಅಪಘಾತದಲ್ಲಿ ಬದುಕುಳಿದ ಕೆಲವರು ಗ್ವಾಟೆಮಾಲಾದಿಂದ ಬಂದವರು ಎಂದು ಮೊರೆನೊ ಹೇಳಿದ್ದಾರೆ.