ಟೊರೊಂಟೊ:ಜುಲೈನಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ತಾಲಿಬಾನ್ ಆಫ್ಘನ್ಅನ್ನು ವಶಕ್ಕೆ ಪಡೆದಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ಮಹಿಳೆಯರ ವಿಚಾರವಾಗಿ ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಆತಂಕ ಸೃಷ್ಟಿಸಿದೆ.
ದೇಶದಲ್ಲಿ ತಾಲಿಬಾನ್ಗಳು ಹಿಂಸಾಚಾರವನ್ನು ತೀವ್ರಗೊಳಿಸಿದ್ದು, ಮಹಿಳೆಯರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಕೆಲವು ವಿಕೃತ ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ಇದನ್ನೂ ಓದಿ: ದೇಶಕ್ಕೆ ಮರಳಲು ಸಹಾಯ ಮಾಡಿ.. ಮೋದಿ ಸರ್ಕಾರಕ್ಕೆ 114 ಮಂದಿ ಭಾರತೀಯರ ಮನವಿ
‘15 ವರ್ಷ ಮೇಲ್ಪಟ್ಟ ಬಾಲಕಿಯರಿಗೆ ಮದುವೆ’
ಮೆಕ್‌ಗಿಲ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ವೃಂದಾ ನಾರಾಯಣ್ ಪ್ರಕಾರ, ಜುಲೈ ಆರಂಭದಲ್ಲೇ ತಾಲಿಬಾನ್ ನಾಯಕರು, ಬದಾಖಾನ್ ಮತ್ತು ತಖರ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡರು.
ಈ ವೇಳೆ ಅವರು, ಸ್ಥಳೀಯ ಧಾರ್ಮಿಕ ಮುಖಂಡರು 15 ವರ್ಷ ಮೇಲ್ಪಟ್ಟ ಬಾಲಕೀಯರನ್ನು ಧಾರ್ಮಿಕ ಮುಖಂಡರು ಮದುವೆಯಾಗಬಹುದು. 45 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ತಾಲಿಬಾನ್ ಉಗ್ರರು ವಿವಾಹವಾಗಬಹುದು ಎಂಬ ನಿಯಮ ಜಾರಿಗೊಳಿಸಿದರು.
ಅಲ್ಲದೆ, ಅಪ್ರಾಪ್ತ ವಿಧವೆಯರ ಪಟ್ಟಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದರು. ಈ ಆದೇಶಗಳು ಜಾರಿಯಾಗಿವೆಯೋ, ಇಲ್ಲವೋ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.
‘ಇಸ್ಲಾಂ ಧರ್ಮಕ್ಕೆ ಪರಿವರ್ತನೆ’
ಬಲವಂತದ ಮದುವೆಗಳು ನಡೆದರೆ, ಮಹಿಳೆಯರು ಮತ್ತು ಹುಡುಗಿಯರನ್ನು ಪಾಕಿಸ್ತಾನದ ವಜಿರಿಸ್ತಾನಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರ ಮನಃಪರಿವರ್ತನೆ ಮಾಡಿ, ಅಧಿಕೃತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತದೆ.
9 ಲಕ್ಷ ಜನರ ಸ್ಥಳಾಂತರ
ತಾಲಿಬಾನ್ನ ಈ ಆದೇಶವು ಮಹಿಳೆಯರಲ್ಲಿ ಭೀತಿ ಸೃಷ್ಟಿಸಿದ್ದು, ಅವರನ್ನು ವಲಸೆ ಹೋಗಲು ಪ್ರೇರೇಪಿಸಿದೆ. ಕಳೆದ ಮೂರು ತಿಂಗಳಲ್ಲಿ 9 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ತಾಲಿಬಾನ್ನ ಈ ನಿರ್ಧಾರವು, ಮುಂಬರುವ ದಿನಗಳ ಕರಾಳತೆಯನ್ನು ಈಗಲೇ ಸೂಚಿಸುತ್ತಿದೆ.
ಈ ಆದೇಶವು 1996 - 2006ರ ನಡುವಣ ತಾಲಿಬಾನ್ನ ಕ್ರೂರ ಆಡಳಿತವನ್ನು ನೆನಪಿಸುತ್ತಿದೆ. ಮಹಿಳೆಯರ ವಿಚಾರದಲ್ಲಿ ಪದೇ ಪದೆ ಮಾನವ ಹಕ್ಕುಗಳ ಉಲ್ಲಂಘನೆ, ಉದ್ಯೋಗ, ಶಿಕ್ಷಣವನ್ನೂ ನಿರಾಕರಿಸಿ ಬುರ್ಕಾ ಧರಿಸಲು ಒತ್ತಾಯಿಸಲಾಯಿತು.
ಇದನ್ನೂ ಓದಿ: 'ಅಫ್ಘಾನಿಸ್ತಾನದ ವಿಚಾರದಲ್ಲಿ ಬೈಡನ್ ನಿರ್ಧಾರ ತಾರ್ಕಿಕವಾದದ್ದು' - ಪಾಕಿಸ್ತಾನದ ರಾಯಭಾರಿ ಹೇಳಿಕೆ
‘ಲೈಂಗಿಕ ಗುಲಾಮಗಿರಿಯಲ್ಲಿ ಹೆಣ್ಣುಮಕ್ಕಳು’
ಇತ್ತೀಚಿನ ದಿನಗಳಲ್ಲಿ ತಾಲಿಬಾನ್ ಕೈಗೊಳ್ಳುತ್ತಿರುವ ನಿರ್ಧಾರವು, ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಗೆ ತಳ್ಳುವ ಉದ್ದೇಶಗಳನ್ನು ಹೊಂದಿದೆ. ಜತೆಗೆ 12 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಲಾಗಿದ್ದು, ಉದ್ಯೋಗದ ಹಕ್ಕನ್ನೂ ಕಸಿದುಕೊಳ್ಳಲಾಗಿದೆ. ಪುರುಷರ ರಕ್ಷಣೆಯಿಲ್ಲದೇ, ಮಹಿಳೆಯರು ಹೊರ ಹೋದರೆ ಅವರನ್ನು ಥಳಿಸಿ ಕೊಲ್ಲಲಾಗುತ್ತದೆ.
ಮದುವೆ ನೆಪದಲ್ಲಿ ಲೈಂಗಿಕ ಗುಲಾಮಗಿರಿ
ತಾಲಿಬಾನ್ ಉಗ್ರರು ಇಲ್ಲಿನ ಹೆಣ್ಣುಮಕ್ಕಳನ್ನು ಮದುವೆಯಾಗುವ ಮೂಲಕ ತಮ್ಮ ಪಡೆ ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ. ಕಳೆದ 20 ವರ್ಷಗಳಿಂದ ಇಲ್ಲಿನ ಸ್ತ್ರೀಯರು ಗಳಿಸಿದ್ದ ಶಿಕ್ಷಣ, ಉದ್ಯೋಗ, ರಾಜಕೀಯ ಭಾಗವಹಿಸುವಿಕೆಯೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಮದುವೆ ನೆಪದಲ್ಲಿ ಲೈಂಗಿಕತೆಗೆ ಪ್ರಚೋದಿಸಿ ಅವರನ್ನು ವೇಶ್ಯೆಯರನ್ನಾಗಿ ಮಾಡುವುದು ಅಪರಾಧ.
ಜಿನೀವಾ ಸಮಾವೇಶದ ಪರಿಚ್ಛೇದ 27ರಂತೆ ಮಹಿಳೆಯರು ತಮ್ಮ ಗೌರವದ ಮೇಲೆ, ವಿಶೇಷವಾಗಿ ಅತ್ಯಾಚಾರ, ಬಲವಂತದ ವೇಶ್ಯಾವಾಟಿಕೆ ಅಥವಾ ಯಾವುದೇ ರೀತಿಯ ಅಸಭ್ಯ ಅಭ್ಯಾಸದ ವಿರುದ್ಧ ಯಾವುದೇ ದಾಳಿಯಿಂದ ರಕ್ಷಿಸಲ್ಪಡಬೇಕು. ಆದರೆ, ಉಗ್ರರು ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಹೆಣ್ಮಕ್ಕಳನ್ನು ತಮ್ಮ ಇಚ್ಛೆಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ.
2008 ರಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 1820ರ ನಿರ್ಣಯ ಅಂಗೀಕರಿಸಿತು. ಇದರ ಪ್ರಕಾರ' ಅತ್ಯಾಚಾರ ಮತ್ತು ಇತರ ಲೈಂಗಿಕ ದೌರ್ಜನ್ಯಗಳು ಮಹಾನ್ ಅಪರಾಧಗಳು. ಇವು ಮಾನವೀಯತೆಯ ವಿರುದ್ಧದ ಅಪರಾಧಗಳು ಎಂದು ಘೋಷಿಸಿತು.
‘ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕಾದ ಅಗತ್ಯವಿದೆ’
ವಿಶ್ವಸಂಸ್ಥೆಯು ಈಗ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸಲು ನಿರ್ಣಾಯಕ ಕ್ರಮ ಕೈಗೊಳ್ಳಬೇಕು. ಅಂತಾರಾಷ್ಟ್ರೀಯ ಸಮುದಾಯವು ಶಾಶ್ವತ ಶಾಂತತೆ ಕಾಪಾಡಲು ಈ ನಾಲ್ಕು ನೀತಿಗಳನ್ನು ಅನುಸರಿಸಬೇಕಿದೆ ಎಂದು ವೃಂದಾ ನಾರಾಯಣ್ ಹೇಳಿದ್ದಾರೆ.
1. 1820 ರ ನಿರ್ಣಯವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು
2. ಆಫ್ಘನ್ನಲ್ಲಿ ಕದನ ವಿರಾಮಕ್ಕೆ ಕರೆ ನೀಡಬೇಕು
3. ಅಫ್ಘಾನಿಸ್ತಾನದ ಸಂವಿಧಾನ, ರಾಷ್ಟ್ರೀಯ ಕಾನೂನು ಮತ್ತು ಅಂತಾರಾಷ್ಟ್ರೀಯ ಕಾನೂನಿನಡಿ ಮಹಿಳಾ ಹಕ್ಕುಗಳನ್ನು ಗೌರವಿಸಬೇಕು
4. ಶಾಂತಿ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ಭಾಗವಹಿಸುವಂತೆ ಮಾಡಬೇಕು.
ಇದನ್ನೂ ಓದಿ: ಇದೇನು ರೈಲೋ.. ವಿಮಾನವೋ: ಆಫ್ಘನ್ ಪ್ರಜೆಗಳ ಸಂಕಷ್ಟ ನೋಡಿ
ಪ್ರಸ್ತುತ ಅಫ್ಘಾನಿಸ್ತಾನಕ್ಕೆ ನೆರವಾಗಿರುವ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟವು, ಮಹಿಳಾ ಹಕ್ಕುಗಳು ಮತ್ತು ಶಿಕ್ಷಣ ಮತ್ತು ಉದ್ಯೋಗದ ಪ್ರವೇಶದ ಬಗ್ಗೆ ಷರತ್ತುಬದ್ಧ ನೆರವು ನೀಡಬೇಕು. ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ಕಾನೂನಿನಡಿ ಸಮಾನ ರಕ್ಷಣೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.