ವಾಷಿಂಗ್ಟನ್(ಅಮೆರಿಕ):ಉಕ್ರೇನ್ ಮೇಲೆ ರಷ್ಯಾ ಆಕ್ರಮಣ 9ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ರಷ್ಯಾ ಆಕ್ರಮಣಕ್ಕೆ ಹೆದರಿ ಸಾಕಷ್ಟು ಮಂದಿ ಉಕ್ರೇನ್ನಿಂದ ಪಲಾಯನ ಮಾಡಿದ್ದಾರೆ. ಅಕ್ಕಪಕ್ಕದ ರಾಷ್ಟ್ರಗಳಿಗೆ ಉಕ್ರೇನಿಗರು ತೆರಳುತ್ತಿದ್ದು, ಕೆಲವು ರಾಷ್ಟ್ರಗಳು ತಾತ್ಕಾಲಿಕ ಆಶ್ರಯವನ್ನು ನೀಡುತ್ತಿವೆ.
ಯುದ್ಧ ಆರಂಭವಾಗುವ ಮೊದಲಿನಿಂದಲೂ ಬೇರೆ ಬೇರೆ ರಾಷ್ಟ್ರಗಳಲ್ಲಿ ಉಳಿದಿರುವ ಉಕ್ರೇನ್ ಜನರು ತಮ್ಮ ರಾಷ್ಟ್ರಕ್ಕೆ ತೆರಳಲು ಹೆದರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ವಾಸ ಮಾಡುತ್ತಿರುವ ಉಕ್ರೇನ್ ಪ್ರಜೆಗಳಿಗೆ ಜೋ ಬೈಡನ್ ಸರ್ಕಾರ ರಿಲೀಫ್ ನೀಡಿದೆ. ಉಕ್ರೇನ್ ಜನರಿಗೆ ತಾತ್ಕಾಲಿಕ ಸಂರಕ್ಷಿತ ಸ್ಥಿತಿಯನ್ನು (Temporary Protected Status) 18 ತಿಂಗಳವರೆಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಕಾರ್ಯದರ್ಶಿ ಅಲೆಜಾಂಡ್ರೊ ಮೇಯೊರ್ಕಾಸ್ ಹೇಳಿದ್ದಾರೆ.
ತಾತ್ಕಾಲಿಕ ಸಂರಕ್ಷಿತ ಸ್ಥಿತಿ ಎಂದರೇನು?:ಯುದ್ಧ ಮತ್ತು ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾದ ದೇಶದ ನಾಗರಿಕರಿಗೆ ಅಮೆರಿಕ ತಾತ್ಕಾಲಿಕವಾಗಿ ಪರಿಹಾರ ಮತ್ತು ಆಶ್ರಯ ನೀಡುತ್ತದೆ. ಇದನ್ನೇ ತಾತ್ಕಾಲಿಕ ಸಂರಕ್ಷಿತ ಸ್ಥಿತಿ ಎಂದು ಕರೆಯುತ್ತಾರೆ. ಕನಿಷ್ಠ ಪಕ್ಷ ಮಂಗಳವಾರ (ಮಾರ್ಚ್ 1ರಂದು) ಅಮೆರಿಕದಲ್ಲಿರುವ ವ್ಯಕ್ತಿಗಳು ಈ ತಾತ್ಕಾಲಿಕ ಸಂರಕ್ಷಿತ ಸ್ಥಿತಿಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.
ರಷ್ಯಾದೊಂದಿಗೆ ನೇರ ಸಂಪರ್ಕ:ಉಕ್ರೇನ್‌ನಲ್ಲಿನ ಯುದ್ಧಕ್ಕೆ ಸಂಬಂಧಿಸಿದಂತೆ ಅನಪೇಕ್ಷಿತ ಸಂಘರ್ಷವನ್ನು ತಪ್ಪಿಸಲು ಅಮೆರಿಕದ ರಕ್ಷಣಾ ಇಲಾಖೆ ರಷ್ಯಾದ ರಕ್ಷಣಾ ಸಚಿವಾಲಯದೊಂದಿಗೆ ನೇರ ಸಂಪರ್ಕ ಸಾಧಿಸುತ್ತಿದೆ. ಮಾರ್ಚ್1 ರಿಂದ ಈ ಸಂಪರ್ಕ ಏರ್ಪಟ್ಟಿದ್ದು, ಮಿಲಿಟರಿ ಕಾರ್ಯಾಚರಣೆ ವೇಳೆ ನಡೆಯುವ ಅನಿರೀಕ್ಷಿತ ಅವಘಡಗಳನ್ನು ತಪ್ಪಿಸಲು ಅಮೆರಿಕ ರಕ್ಷಣಾ ಇಲಾಖೆ ಈ ಸಂಪರ್ಕವನ್ನು ರಚಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅತಿ ದೊಡ್ಡ ಅಣು ವಿದ್ಯುತ್ ಸ್ಥಾವರದತ್ತ ರಷ್ಯಾ ಪಡೆ :ರಷ್ಯಾದ ಪಡೆಗಳ ಅತಿ ದೊಡ್ಡ ತುಕಡಿ ಅತಿದೊಡ್ಡ ಪರಮಾಣು ಸ್ಥಾವರವಾದ ಜಪೊರಿಝಿಯಾ ಕಡೆಗೆ ಸಾಗುತ್ತಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಪರಮಾಣು ಸ್ಥಾವರ ಉಕ್ರೇನ್‌ನಲ್ಲಿ ಒಟ್ಟು ಉತ್ಪಾದನೆಯಾಗುವ ವಿದ್ಯುತ್ನ ಕಾಲು ಭಾಗದಷ್ಟು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಅಂದಹಾಗೆ ಈ ವಿದ್ಯುತ್ ಸ್ಥಾವರ ಯೂರೋಪಿನ ಅತಿ ದೊಡ್ಡ ವಿದ್ಯುತ್ ಸ್ಥಾವರಗಳಲ್ಲಿ ಒಂದಾಗಿದೆ.
ಜಪೊರಿಝಿಯಾ ವಿದ್ಯುತ್ ಸ್ಥಾವರದ ಸಮೀಪದಲ್ಲಿ ರಾತ್ರಿ ಭಾರಿ ಗುಂಡಿನ ಶಬ್ದ ಕೇಳಿಬಂದಿದೆ ಎಂದು ಉಕ್ರೇನಿಯನ್ ಪರಮಾಣು ಶಕ್ತಿ ಕಂಪನಿ ಎನರ್‌ಗೋಟಮ್ ಮತ್ತು ಎನರ್ಹೋಡರ್ನ ಮೇಯರ್ ಡಿಮಿಟ್ರೋ ಓರ್ಲೋವ್ ಮಾಹಿತಿ ನೀಡಿದ್ದಾರೆ.
ಉಕ್ರೇನಿಯನ್ ಪ್ರಧಾನ ಮಂತ್ರಿ ಡೆನಿಸ್ ಶ್ಮಿಹಾಲ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೋಡಿಮೀರ್ ಝೆಲೆನ್ಸ್ಕಿ ಪರಮಾಣು ಸ್ಥಾವರಗಳನ್ನು ರಕ್ಷಿಸಲು, ಆ ಪ್ರದೇಶ ಬಳಿಗೆ ವಿಮಾನ ಹಾರಾಟವನ್ನು ನಿರ್ಬಂಧಿಸುವಂತೆ ಅಮೆರಿಕ ಮತ್ತು ನ್ಯಾಟೋ ಪಡೆಗಳಿಗೆ ಮನವಿ ಮಾಡಿದ್ದಾರೆ.