ವಾಷಿಂಗ್ಟನ್: ರಷ್ಯಾ-ಉಕ್ರೇನ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುದ್ಧದ ಭೀತಿ ಎದುರಾಗಿದೆ. ಉಕ್ರೇನ್ ಪರ ನಿಂತಿರುವ ಅಮೆರಿಕ, ಭಾರತದೊಂದಿಗೆ ಇರುವ ತಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿದೆ.
ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ರಷ್ಯಾ - ಅಮೆರಿಕ ನಡುವೆ ಇದೀಗ ಉದ್ವಿಗ್ನತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಭಾರತ - ಯುಎಸ್ ಬಾಂಧವ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್, ಭಾರತದೊಂದಿಗೆ ನಮ್ಮದೇ ಆದ ಅರ್ಹತೆಯ ಸಂಬಂಧವನ್ನು ಹೊಂದಿದ್ದೇವೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತದ ಅಭಿಪ್ರಾಯದ ಕುರಿತು ಪ್ರತಿಕ್ರಿಯಿಸಲು ನೆಡ್ ಪ್ರೈಸ್ ನಿರಾಕರಿಸಿದ್ದು, ಈ ನಿರ್ದಿಷ್ಟ ವಿಷಯದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಮ್ಮ ಪಾಲುದಾರ ರಾಷ್ಟ್ರ ಭಾರತ ತನ್ನ ನಿಲುವು ತಿಳಿಸುವ ನಿರ್ಧಾರವನ್ನು ಆ ದೇಶಕ್ಕೆ ಬಿಡುತ್ತೇನೆ ಎಂದಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾದ ಅಪ್ರಚೋದಿತ ಸಂಭಾವ್ಯ ಆಕ್ರಮಣದ ಬಗ್ಗೆ ನಮ್ಮ ಕಳವಳ ಕುರಿತು ಪಾಲುದಾರ ರಾಷ್ಟ್ರ ಭಾರತ ಸೇರಿದಂತೆ ಜಗತ್ತಿನ ಹತ್ತಾರು ರಾಷ್ಟ್ರಗಳ ಸಂಪರ್ಕದಲ್ಲಿ ಇದ್ದೇವೆ. ಈಗಾಗಲೇ ಅಮೆರಿಕ ಹಲವು ಹಂತಗಳಲ್ಲಿ ಮಾತುಕತೆಯಲ್ಲಿ ಇದೆ ಎಂದು ಹೇಳಿದ್ದಾರೆ.