ನ್ಯೂಯಾರ್ಕ್:ಕಳೆದೊಂದು ವಾರದಿಂದ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾಷಣಕ್ಕೂ ಮುನ್ನ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಾರೆ. ಕಾಶ್ಮೀರ ವಿಚಾರ ಜಾಗತಿಕ ಸ್ವರೂಪ ಪಡೆದಿರುವ ವೇಳೆಯಲ್ಲಿ ಮೋದಿ ಹಾಗೂ ಇಮ್ರಾನ್ ಖಾನ್ ಭಾಷಣ ಕುತೂಹಲ ಕೆರಳಿಸಿದೆ.
ಇಂದಿನ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನ ಅಮೆರಿಕಾ ಕಾಲಮಾನ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ. ಮಾರಿಷಸ್ ಅಧ್ಯಕ್ಷ ಪರಮಸಿವುಂ ಪಿಳ್ಳೈ ವ್ಯಾಪೂರಿ ಭಾಷಣದ ಮೂಲಕ ಅಧಿವೇಶನಕ್ಕೆ ಚಾಲನೆ ದೊರೆಯುತ್ತೆ. ನಂತರದಲ್ಲಿ ಇಂಡೋನೇಷ್ಯಾ ಉಪಾಧ್ಯಕ್ಷರ ಭಾಷಣ ಹಾಗೂ ಲೆಸೋತೋ ಪ್ರಧಾನಿ ಭಾಷಣ ಆಯೋಜನೆಯಾಗಿದೆ. ಈ ನಾಯಕರ ಭಾಷಣದ ಬಳಿಕ ಮೋದಿ ತಮ್ಮ ಭಾಷಣ ಆರಂಭಿಸಲಿದ್ದಾರೆ.
ಮೋದಿ ಭಾಷಣದ ಅಜೆಂಡಾ ಏನು?
ಒಂದೆಡೆ ಕಾಶ್ಮೀರ ವಿಚಾರವನ್ನು ಅನಗತ್ಯವಾಗಿ ದುಪ್ಪಟ್ಟು ಮಾಡುತ್ತಿದ್ದು, ಮತ್ತೊಂಡೆದೆ ಭಾರತಕ್ಕೆ ಡ್ರೋನ್ ಹಾಗೂ ಉಗ್ರರನ್ನು ಕಳುಹಿಸುತ್ತಿರುವ ಪಾಕಿಸ್ತಾನ ನಡೆಯನ್ನು ಇಂದಿನ ಭಾಷಣದಲ್ಲಿ ಮೋದಿ ಉಲ್ಲೇಖ ಮಾಡುವ ಸಾಧ್ಯತೆ ಇದೆ. ಈ ಮೂಲಕ ಪಾಕ್‌ನ ದ್ವಿಮುಖ ನೀತಿಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲಿದ್ದಾರೆ.
'ಹೌಡಿ ಮೋದಿ' ಕಾರ್ಯಕ್ರಮದಲ್ಲೂ ಉಗ್ರಪೋಷಕ ರಾಷ್ಟ್ರ ಎಂದು ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿ ಚಾಟಿ ಬೀಸಿದ್ದರು. ಈ ಕಾರ್ಯಕ್ರಮದ ಬಳಿಕವೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರ ವಿಚಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟು, ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಒತ್ತಡ ಹೇರಿದ್ದರು.
ಇಮ್ರಾನ್ ಖಾನ್ ಭಾಷಣದ ಹೈಲೈಟ್ಸ್ ಏನಿರಬಹುದು?
ಪ್ರಧಾನಿ ಮೋದಿ ಭಾಷಣದ ಕೆಲ ಹೊತ್ತಿನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಮಾಡಲಿದ್ದಾರೆ. ಇಮ್ರಾನ್ ಖಾನ್ ಮತ್ತೊಮ್ಮೆ ಕಾಶ್ಮೀರ ವಿಚಾರವನ್ನೇ ಇಂದಿನ ಭಾಷಣದಲ್ಲೂ ಪ್ರಸ್ತಾಪ ಮಾಡುವ ಸಾಧ್ಯತೆ ನಿಚ್ಚಳವಾಗಿದೆ.