ವಾಷಿಂಗ್ಟನ್ (ಅಮೆರಿಕ): ಭಾರತ ಮತ್ತು ಚೀನಾದಂತಹ ದೇಶಗಳು ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದರೆ ಅಮೆರಿಕಕ್ಕಿಂತ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳು ಕಂಡುಬರುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
ಅಮೆರಿಕವು ಇದುವರೆಗೂ 20 ಮಿಲಿಯನ್ ಪರೀಕ್ಷೆಗಳನ್ನು ನಡೆಸಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕಕ್ಕೆ ಹೋಲಿಸಿದರೆ ಜರ್ಮನಿ 4 ಮಿಲಿಯನ್ ಮತ್ತು ದಕ್ಷಿಣ ಕೊರಿಯಾ ಸುಮಾರು 3 ಮಿಲಿಯನ್ ಪರೀಕ್ಷೆಗಳನ್ನು ನಡೆಸಿವೆ ಎಂದು ಅವರು ಹೇಳಿದ್ದಾರೆ.
ನಾವು 20 ಮಿಲಿಯನ್ ಪರೀಕ್ಷೆಗಳನ್ನು ಮಾಡಿದ್ದೇವೆ. ನಾವು ಹೆಚ್ಚು ಪರೀಕ್ಷೆ ನಡೆಸಿದ ಕಾರಣ ಪ್ರಕರಣಗಳ ಸಂಖ್ಯೆಯೂ ಅಧಿಕವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ಕೊರೊನಾ ವೈರಸ್ ಸಂಪನ್ಮೂಲ ಕೇಂದ್ರದ ಪ್ರಕಾರ, ಯುಎಸ್ನಲ್ಲಿ ಸುಮಾರು 1.9 ಮಿಲಿಯನ್ ಪ್ರಕರಣಗಳು ದಾಖಲಾಗಿದ್ದು, 1,09,000ಕ್ಕೂ ಹೆಚ್ಚು ಸಾವು ಸಂಭವಿಸಿದೆ.
ಭಾರತ ಮತ್ತು ಚೀನಾದಲ್ಲಿ ಒಟ್ಟು ಕೊರೊನಾ ವೈರಸ್ ಪ್ರಕರಣಗಳು ಕ್ರಮವಾಗಿ 2,36,184 ಮತ್ತು 84,177 ಇವೆ. ಭಾರತ ಇದುವರೆಗೆ 4 ದಶಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಪರೀಕ್ಷೆಗಳನ್ನು ನಡೆಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.