ನ್ಯೂಯಾರ್ಕ್:ಒಂದು ವೇಳೆ ಅಮೆರಿಕದಲ್ಲಿ ರಿಪಬ್ಲಿಕ್ ಪಾರ್ಟಿಯನ್ನು ಡೆಮಾಕ್ರಟಿಕ್ ಪಾರ್ಟಿ ಮಣಿಸಿದರೆ ಕ್ಯಾಲಿಫೋರ್ನಿಯಾ ಸೆನೆಟರ್ ಕಮಲಾ ಹ್ಯಾರಿಸ್ ಜೋ ಬಿಡೆನ್ಗೆ ''ಬಾಸ್'' ಆಗ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಬಾಂಬ್ ಸಿಡಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಬಿಡೆನ್ ಅವರ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಜೋ ಬಿಡೆನ್ ಹಾಗೂ ಅವರ ಬಾಸ್ ಕಮಲಾ ಹ್ಯಾರಿಸ್ ಅವರ ಹುಚ್ಚು ಸಮಾಜವಾದಿ ನೀತಿಗಳಿಂದ ದೇಶದ ಆರ್ಥಿಕತೆ ಹಾಳು ಮಾಡಲು ನೀವು ಬಯಸುತ್ತೀರಾ? ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.
ನವೆಂಬರ್ 3ರಂದು ಚುನಾವಣೆ ನಡೆಯುವ ಹಿನ್ನೆಲೆ ಓಶ್ಕೋಷ್, ವಿಸ್ಕೋಸಿನ್ಗಳಲ್ಲಿ ಟ್ರಂಪ್ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ, ಬಿಡೆನ್ ಮಾನಸಿಕ ಸ್ಥಿತಿಯ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ. ಇನ್ನು ಉಪಾಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಜಯಶಾಲಿಯಾದರೆ 78 ವರ್ಷದ ಬಿಡೆನ್ ಅಧ್ಯಕ್ಷರಾಗಲಿದ್ದು, ಈ ವೇಳೆ, 56 ವರ್ಷದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಲಿದ್ದಾರೆ. ಈ ಮೂಲಕ ಅತ್ಯಂತ ವಯಸ್ಸಾದ ವ್ಯಕ್ತಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಏರಲಿದ್ದಾರೆ ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ.
ಬಿಡೆನ್ ಅವರು ಸಮಾಜವಾದಿ ಪಕ್ಷದ ಟ್ರೋಜನ್ ಹಾರ್ಸ್ ಆಗಿದ್ದು, ಇವರಿಗೆ ಮುಂದೆನಾಗುತ್ತದೆ ಎಂಬುದರ ಬಗ್ಗೆ ಯಾವುದೇ ಸುಳಿವೂ ಇರುವುದಿಲ್ಲ. ಆದರೆ, ಅವರ ಸುತ್ತಲಿರುವ ಜನ ತುಂಬಾ ಬುದ್ಧಿವಂತರು ಎಂದು ಅಭಿಪ್ರಾಯಪಟ್ಟಿರುವ ಟ್ರಂಪ್, ಕಮಲಾ ಹ್ಯಾರಿಸ್ ಅವರು ಬಿಡೆನ್ ಅವರನ್ನು ತುಂಬಾ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದು, ಸದ್ಯಕ್ಕೆ ಬಿಡೆನ್ ಅವರನ್ನು ಹೊಗಳುತ್ತಿದ್ದಾರೆ ಅಷ್ಟೇ ಎಂದು ಆರೋಪಿಸಿದ್ದಾರೆ.
ಇದರ ಜೊತೆಗೆ ಬಿಡೆನ್ ಹಾಗೂ ಹ್ಯಾರಿಸ್ ಗೆದ್ದರೆ ಚೀನಾದ ವಿರುದ್ಧ ಅಮೆರಿಕ ಮಣಿಯಬೇಕಾಗುತ್ತೆ. ಬಿಡೆನ್ ಚೀನಾವನ್ನು ಮೊದಲ ಸ್ಥಾನದಲ್ಲಿ ಅಮೆರಿಕವನ್ನು ಕೊನೆಯ ಸ್ಥಾನದಲ್ಲಿ ಇರಿಸುತ್ತಾರೆ ಎಂದು ಟ್ರಂಪ್ ಎಚ್ಚರಿಕೆ ಸಹ ನೀಡಿದ್ದಾರೆ.