ವಾಷಿಂಗ್ಟನ್, ಅಮೆರಿಕ :ಅಫ್ಘಾನಿಸ್ತಾನದಿಂದ ಸೈನ್ಯ ಹಿಂತೆಗೆದುಕೊಂಡಿದ್ದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಈಗಿನ ಪರಿಸ್ಥಿತಿಗೆ ಅಲ್ಲಿನ ನಾಯಕರೇ ಹೊಣೆ ಎಂದು ಈ ವೇಳೆ ಆರೋಪಿಸಿದ್ದಾರೆ.
ಅಫ್ಘಾನಿಸ್ತಾನ ತಾಲಿಬಾನ್ ವಶವಾದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೋ ಬೈಡನ್ ಅಫ್ಘಾನಿಸ್ತಾನದಲ್ಲಿ ನಾವು ಇಂಥಹ ಪರಿಸ್ಥಿತಿಯನ್ನು ನಿರೀಕ್ಷೆ ಮಾಡಿದ್ದೆವು. ಆದರೆ ಆ ಪರಿಸ್ಥಿತಿ ಇಷ್ಟು ಬೇಗ ಬರುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆಫ್ಘನ್ ನಾಯಕರೇ ಆ ದೇಶವನ್ನು ತಾಲಿಬಾನಿಗಳಿಗೆ ಬಿಟ್ಟುಕೊಟ್ಟು, ದೇಶವನ್ನು ತೊರೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆದ ನಿರ್ಧಾರವನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ ಎಂದು ಬೈಡನ್ 20 ವರ್ಷಗಳ ನಂತರ ಅಮೆರಿಕ ಪಡೆಗಳನ್ನು ಹಿಂತೆಗೆದುಕೊಳ್ಳಲು ಕಠಿಣ ಕ್ರಮ ಕೈಗೊಂಡಿದ್ದೇನೆ ಎಂದು ಅಭಿಪ್ರಾಯಪಟ್ಟರು.
ಆಫ್ಘನ್ಗೆ ಅಮೆರಿಕದ ಸೇನೆ ತೆರಳಿದ್ದು, ಆ ರಾಷ್ಟ್ರವನ್ನು ಕಟ್ಟುವ ಕೆಲಸಕ್ಕೆ ಅಲ್ಲ ಎಂದಿರುವ ಬೈಡನ್, ಸೇನೆ ಅಲ್ಲಿಂದ ವಾಪಸ್ಸಾದರೂ ಭಯೋತ್ಪಾದನೆಯ ವಿರುದ್ಧದ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.