ಬ್ರೆಸಿಲಿಯಾ(ಬ್ರೆಜಿಲ್): ಶತಮಾನದ ಮಳೆಗೆ ದಕ್ಷಿಣ ಅಮೆರಿಕ ಖಂಡದಲ್ಲಿರುವ ದೇಶ ಬ್ರೆಜಿಲ್ ಕಂಗೆಟ್ಟಿದೆ. ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತ ಸುಮಾರು 117 ಮಂದಿಯನ್ನು ಈಗಾಗಲೇ ಬಲಿ ತೆಗೆದುಕೊಂಡಿದೆ. ಪೆಟ್ರೋಪೋಲಿಸ್ ನಗರ ವರುಣಾರ್ಭಟಕ್ಕೆ ತತ್ತರಿಸಿದೆ. ಇಲ್ಲಿ ಅಂದಾಜಿಸಲಾಗಷ್ಟು ಹಾನಿ ಸಂಭವಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ರಿಯೊ ಡಿ ಜನೈರೊ ನಗರದ ಉತ್ತರಕ್ಕಿರುವ ಪೆಟ್ರೋಪೊಲಿಸ್‌ನಲ್ಲಿ ಕನಿಷ್ಠ 60 ಮನೆಗಳು ನಾಶಗೊಂಡಿವೆ. ಇನ್ನೂ ಸಾಕಷ್ಟು ಮಂದಿ ಅವಶೇಷಗಳ ಅಡಿಯಲ್ಲೇ ಸಿಲುಕಿರುವ ಸಾಧ್ಯತೆ ಇದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ನಾಗರಿಕ ರಕ್ಷಣಾ ಸೇವೆಯ ಸಿಬ್ಬಂದಿ ಜನರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಷ್ಯಾದ ನ್ಯೂಸ್ ಏಜೆನ್ಸಿ ವರದಿಯಲ್ಲಿ ಉಲ್ಲೇಖಿಸಿದೆ.
ದೇಶದ ಹಲವು ಭಾಗಗಳಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ಫೆಬ್ರವರಿ 17ರ ಮಧ್ಯಾಹ್ನ ಮಳೆ ತೀವ್ರಗೊಂಡಿದೆ. ಪೆಟ್ರೊಪೊಲಿಸ್ ನಗರವೊಂದರಲ್ಲೇ 6 ಸೆಂಟಿಮೀಟರ್ ಮಳೆ ಸುರಿದಿದೆ. ಇದು ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ.