ವಿಲ್ಮಿಂಗ್ಟನ್(ಅಮೆರಿಕ): ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲಿಸಲು ಕಸರತ್ತು ನಡೆಸುತ್ತಿರುವ ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬಿಡೆನ್, ಈಗ ಕಪ್ಪು ವರ್ಣೀಯರ ಮತಗಳನ್ನು ಸೆಳೆಯಲು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾ ಕ್ಷೇತ್ರದ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್ ಅವರನ್ನು ತಮ್ಮ ಪಕ್ಷ ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ಬಿಡೆನ್ ನೇಮಕ ಮಾಡಿದ್ದಾರೆ. ಈ ಮೂಲಕ ಕಪ್ಪು ಮಹಿಳೆಯೊಬ್ಬರನ್ನು ನೇಮಿಸಿ ಬಿಡೆನ್ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೇ ದೇಶದ ಪ್ರಭಾವಿ ನಾಯಕನಾಗಿರುವ ಡೊನಾಲ್ಡ್ ಟ್ರಂಪ್ರನ್ನು ಸೋಲಿಸುವ ಸಲುವಾಗಿ ದೇಶದ ಕಪ್ಪು ಜನರ ಮತಗಳನ್ನು ಆಕರ್ಷಿಸುವಲ್ಲಿ ಬಿಡೆನ್ ನಿರ್ಧಾರ ಬಹಳಷ್ಟು ಮಹತ್ವ ಪಡೆದಿದೆ.
2017ರಿಂದಲೂ ಡೆಮಾಕ್ರೆಟಿಕ್ ಪಕ್ಷದಿಂದ ಕ್ಯಾಲಿಫೋರ್ನಿಯಾ ಕ್ಷೇತ್ರದ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್, ಪಕ್ಷದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಅಮೆರಿಕ ಸೆನೆಟ್ನಲ್ಲಿ ಸೇವೆ ಸಲ್ಲಿಸಿದ ಭಾರತ ಮೂಲದ ಮೊದಲ ಅಮೆರಿಕ ಪ್ರಜೆ ಎಂಬ ಖ್ಯಾತಿ ಕಮಲಾ ಅವರದ್ದು. 55 ವರ್ಷದ ಕಮಲಾ ಹ್ಯಾರಿಸ್, ಪ್ರಭಾವಿ ಕಪ್ಪು ಮಹಿಳೆಯಾಗಿ ಅಮೆರಿಕ ರಾಜಕೀಯದಲ್ಲಿ ಖ್ಯಾತರು. ರಾಷ್ಟ್ರ ಮಟ್ಟದಲ್ಲಿ ಚುನಾವಣಾ ಪ್ರಚಾರದ ಕಠಿಣತೆ ಅರಿತಿರುವ ಬಿಡೆನ್, ಕಪ್ಪು ಜನರನ್ನು ಆಕರ್ಷಿಸುವ ಸಲುವಾಗಿ ಕಮಲಾ ಹ್ಯಾರಿಸ್ ಅವರನ್ನು ನೇಮಿಸಿದ್ದಾರೆ