ಕೀವ್(ಉಕ್ರೇನ್):ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೆಪಮಾತ್ರಕ್ಕೆ ಸೇನೆಯನ್ನು ಹಿಂದೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿದ್ದು, ಉಕ್ರೇನ್‌ನ ಮೇಲೆ ದಾಳಿ ಮಾಡಲು ನಿರ್ಧರಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಹೇಳಿದ್ದಾರೆ.
ಈಗಲೇ ರಷ್ಯಾ ಪರ ಬಂಡುಕೋರರು ಉಕ್ರೇನ್ನಲ್ಲಿ ಮಾನವೀಯ ಕೆಲಸಗಳಲ್ಲಿ ತೊಡಗಿದ್ದ ಕಾರಿನ ಮೇಲೆ ಶೆಲ್ ದಾಳಿ ಮಾಡಿದ್ದು, ಯುದ್ಧವಲಯದಿಂದ ಜನರನ್ನು ಸ್ಥಳಾಂತರ ಮಾಡಿದ್ದಾರೆ. ಡೊನೆಟ್ಸ್ಕ್ನಲ್ಲಿ ಕಾರಿನ ಮೇಲೆ ದಾಳಿ ನಡೆದಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ.
ಉಕ್ರೇನ್ ಮೇಲೆ ಆಕ್ರಮಣವನ್ನು ತೀವ್ರಗೊಳಿಸಲು ಪುಟಿನ್ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಎಂಬುದು ಖಚಿತವಾಗಿಲ್ಲ ಎಂದು ಹೇಳಿದ ಒಂದು ವಾರದ ನಂತರ ಗುಪ್ತಚರ ವರದಿಗಳ ಆಧಾರದಲ್ಲಿ ಹೇಳುವುದಾದರೆ, ರಷ್ಯಾ ದಾಳಿ ನಡೆಸಲು ಮುಂದಾಗಿದೆ ಎಂದು ತಿಳಿದು ಬಂದಿದೆ ಎಂದು ಬೈಡನ್ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಸಂಭವವಿದೆ. ಈಗಾಗಲೇ ಪುಟಿನ್ ಸೇನಾ ಕಸರತ್ತು ನಡೆಸಲು ಸೂಚನೆ ನೀಡಿದ್ದಾರೆ ಎಂದು ಬೈಡನ್ ಹೇಳಿದ್ದು, ಮತ್ತೊಂದೆಡೆ ರಷ್ಯಾದ ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸುವುದಾಗಿ ಪುಟಿನ್ ಹೇಳಿಕೊಂಡಿದ್ದಾರೆ.
ರಷ್ಯಾ ಆಕ್ರಮಣ ಮಾಡಿದರೆ ಅದರ ವಿರುದ್ಧ ಬೃಹತ್ ಆರ್ಥಿಕ ಮತ್ತು ರಾಜತಾಂತ್ರಿಕ ನಿರ್ಬಂಧಗಳನ್ನು ಹೇರುವುದಾಗಿ ಬೈಡನ್ ಪುನರುಚ್ಚರಿಸಿದ್ದಾರೆ. ಪುಟಿನ್ ಅವರು ತಾವು ತೆಗೆದುಕೊಂಡ ನಿರ್ಧಾರವನ್ನು ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಅಮೆರಿಕದ ಮಿತ್ರರಾಷ್ಟ್ರಗಳು ಈಗ ಮತ್ತಷ್ಟು ಒಗ್ಗೂಡಿವೆ. ರಷ್ಯಾ ದಾಳಿ ನಡೆಸಿದರೆ, ಅದರ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಬೈಡನ್ ಹೇಳಿದ್ದಾರೆ.
ಉಕ್ರೇನ್ನಲ್ಲಿ ಒಂದು ವಾರದಿಂದ ಆಗುತ್ತಿರುವ ಬೆಳವಣಿಗೆಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ. ರಷ್ಯಾದ 1,50,000 ಸೇನೆ ಉಕ್ರೇನ್‌ನ ಗಡಿ ಸುತ್ತಲೂ ಇದೆ. ಈ ನಡೆ ಅತ್ಯಂತ ದೊಡ್ಡ ದಾಳಿಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಬೆದರಿಕೆ ಅತ್ಯಂತ ಹೆಚ್ಚಿದೆ: ಜೋ ಬೈಡನ್
ರಷ್ಯಾ ಸಂಭಾವ್ಯ ಆಕ್ರಮಣಕ್ಕೆ ಸಿದ್ಧತೆಗಳನ್ನು ಮುಂದುವರೆಸಿದ್ದಾರೆ ಎಂಬುದಕ್ಕೆ ಅಮೆರಿಕದ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದು, ಅವರ ಪ್ರಕಾರ ಉಕ್ರೇನ್ ಗಡಿಯಲ್ಲಿ ನಿಯೋಜಿಸಲಾಗಿದ್ದ ರಷ್ಯಾ ಪಡೆಗಳು ದಾಳಿ ನಡೆಸುವ ಸಾಧ್ಯತೆಯಿರುವ ಪ್ರದೇಶಗಳಿಗೆ ತೆರಳಿದ್ದಾರೆ. ಈ ಮೂಲಕ ಮತ್ತಷ್ಟು ರಷ್ಯಾದ ನಡೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.