ಹ್ಯೂಸ್ಟನ್(ಅಮೆರಿಕ):ವಿಶ್ವವಿಖ್ಯಾತ ರ‍್ಯಾಪರ್ ಟ್ರ್ಯಾವಿಸ್ ಸ್ಕಾಟ್ ಮ್ಯೂಸಿಕ್ ಕಾನ್ಸರ್ಟ್ ವೇಳೆ ನೂಕುನುಗ್ಗಲು ನಡೆದು 8 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಅಮೆರಿಕದ ಟೆಕ್ಸಾಸ್ನ ಹ್ಯೂಸ್ಟನ್ ನಗರದಲ್ಲಿ ನಡೆದಿದೆ.
ಹ್ಯೂಸ್ಟನ್ನಲ್ಲಿ ಆಸ್ಟ್ರೋವರ್ಲ್ಡ್ ಫೆಸ್ಟಿವಲ್ ನಡೆಯುತ್ತಿದ್ದು, ಈ ಫೆಸ್ಟಿವಲ್ನಲ್ಲಿ ಅಮೆರಿಕನ್ ರ‍್ಯಾಪರ್ ಟ್ರ್ಯಾವಿಸ್ ಸ್ಕಾಟ್ ಅವರ ಮ್ಯೂಸಿಕ್ ಕಾನ್ಸರ್ಟ್ ಆಯೋಜಿಸಲಾಗಿತ್ತು. ಮ್ಯೂಸಿಕ್ ಕಾನ್ಸರ್ಟ್ ವೇಳೆಯಲ್ಲಿ ವೇದಿಕೆಯ ಮುಂಭಾಗಕ್ಕೆ ಬರಲು ಜನರು ಯತ್ನಿಸಿದ್ದು, ಈ ವೇಳೆ ನೂಕುನುಗ್ಗಲು ಸಂಭವಿಸಿದೆ ಎಂದು ಹ್ಯೂಸ್ಟನ್ ಫೈರ್ ಚೀಫ್ ಸ್ಯಾಮ್ ಪೆನಾ ಮಾಹಿತಿ ನೀಡಿದ್ದಾರೆ.
17 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 300ಕ್ಕೂ ಹೆಚ್ಚು ಮಂದಿಗೆ ಮೈದಾನಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಭದ್ರತಾ ಸಿಬ್ಬಂದಿಯೂ ಕೂಡಾ ಜನಸಂದಣಿಯನ್ನು ತಡೆಯಲು ವಿಫಲರಾಗಿದ್ದಾರೆ.
ಕಾನ್ಸರ್ಟ್ ನಡೆಯುತ್ತಿದ್ದ ಜಾಗಕ್ಕೆ ತೆರಳುವ ಮೊದಲು ಬ್ಯಾಗ್ಗಳನ್ನು ಪರಿಶೀಲನೆ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ತಳ್ಳಿ ಜನರು ಒಳಗೆ ನುಸುಳಿದ್ದರು. ಬ್ಯಾರಿಕೇಡ್ಗಳನ್ನು ಪಕ್ಕಕ್ಕೆ ಸರಿಸಲಾಗಿತ್ತು. ಭದ್ರತಾ ಸಿಬ್ಬಂದಿ ಜೊತೆಗೆ ಹ್ಯೂಸ್ಟನ್ ಪೊಲೀಸ್ ಇಲಾಖೆಯ ಮೌಂಟೆಡ್ ಪ್ಯಾಟ್ರೋಲ್ ಘಟಕ ಸಿಬ್ಬಂದಿ ಕೂಡಾ ಜನರನ್ನು ನಿಯಂತ್ರಿಸುವ ಕೆಲಸ ಮಾಡಿದ್ದರು. ಆದರೂ ಅವರ ಪ್ರಯತ್ನ ವಿಫಲವಾಗಿತ್ತು.
ಶುಕ್ರವಾರ ರಾತ್ರಿ 9ಗಂಟೆಯಿಂದ ಮ್ಯೂಸಿಕ್ ಕಾನ್ಸರ್ಟ್ ಆಯೋಜಿಸಲಾಗಿದ್ದು, ಸುಮಾರು 50 ಸಾವಿರ ಮಂದಿ ಭಾಗವಹಿಸಲು ಬಂದಿದ್ದರು. ಅವಘಡ ನಡೆದ ಬೆನ್ನಲ್ಲೇ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಇನ್ನು ಸ್ವತಃ ಟ್ರ್ಯಾವಿಸ್ ಸ್ಕಾಟ್ ಈ ಕಾರ್ಯಕ್ರಮದ ಆಯೋಜಕರಾಗಿದ್ದು, 2018ರಿಂದ ಆಸ್ಟ್ರೋವರ್ಲ್ಡ್ ಫೆಸ್ಟಿವಲ್ ನಡೆಯುತ್ತಿದೆ. ಅಮೆರಿಕದ ಅತ್ಯಂತ ದೊಡ್ಡ ಈವೆಂಟ್ಗಳಲ್ಲಿ ಇದೂ ಒಂದಾಗಿದ್ದು, 2020ರಲ್ಲಿ ಕೋವಿಡ್ ಕಾರಣದಿಂದ ರದ್ದು ಮಾಡಲಾಗಿತ್ತು.
ಇದನ್ನೂ ಓದಿ:ಶಂಕಿತ ಇಸ್ಲಾಮಿಕ್ ತೀವ್ರವಾದಿಗಳ ದಾಳಿ: ನೈಜರ್ನಲ್ಲಿ 69 ಮಂದಿ ಸಾವು